ಚಂದ್ರವಳ್ಳಿ ನ್ಯೂಸ್ ಹಿರಿಯೂರು: ಇಲ್ಲಿನ ಹುಳಿಯಾರ್ ರಸ್ತೆಯಲ್ಲಿರುವ ಹಿರಿಯ ಮುಖಂಡ ರಾಜಣ್ಣನವರ ಜನಸಂಪರ್ಕ ಕಚೇರಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರ ನಿಧನಕ್ಕೆ ಸಂತಾಪ ಸಭೆ ನಡೆಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂತಾಪ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಮುಖಂಡ ರಾಜಣ್ಣ, "ಚೆನ್ನಮ್ಮನವರು ಸರಳತೆ ಹಾಗೂ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ಯಾರಿಗೂ ಕೇಡು ಬಯಸದ ಮಾತೃರೂಪಿಯಾದ ಅವರು, 72 ವರ್ಷಗಳ ಕಾಲ ಮಾದರಿ ದಾಂಪತ್ಯ ಜೀವನ ನಡೆಸಿದ್ದರು. ಅವರ ಅಗಲಿಕೆ ದೇವೇಗೌಡರ ಕುಟುಂಬಕ್ಕೆ ತುಂಬಲಾರದ ನಷ್ಟ ತಂದೊಡ್ಡಿದೆ" ಎಂದು ಕಂಬನಿ ಮಿಡಿದರು.
ಮುಂದುವರಿದು ಮಾತನಾಡಿದ ಅವರು, "ಇಡೀ ಕುಟುಂಬವೇ ಸಕ್ರಿಯ ರಾಜಕಾರಣದಲ್ಲಿದ್ದರೂ ಚೆನ್ನಮ್ಮನವರು ಎಂದೂ ರಾಜಕೀಯದ ಹತ್ತಿರ ಸುಳಿಯಲಿಲ್ಲ. ಅಧಿಕಾರದ ಅಹಂ ಇಲ್ಲದೆ, ಪೂರ್ಣ ಪ್ರಮಾಣದಲ್ಲಿ ಕುಟುಂಬ ನಿರ್ವಹಣೆಗೆ ಹೆಗಲು ಕೊಟ್ಟಿದ್ದರು. ತಮ್ಮ ಪತಿ ಹಾಗೂ ಮಕ್ಕಳ ರಾಜಕೀಯ ಏಳಿಗೆಗೆ ಬೆನ್ನೆಲುಬಾಗಿ ನಿಂತು ಶ್ರಮಿಸಿದ ಅವರ ಸಹಜೀವನ ಮತ್ತು ಸಹಬಾಳ್ವೆಯ ಬದುಕು ಎಲ್ಲರಿಗೂ ಮಾದರಿ" ಎಂದು ಅವರ ಬದುಕಿನ ನೆನಪುಗಳನ್ನು ಮೆಲಕು ಹಾಕಿದರು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಮುಖಂಡರಾದ ಜಿ.ಬಿ. ರಾಜು, ಎಂ.ಎಸ್. ರಾಘವೇಂದ್ರ, ಹರ್ಷ, ಆಸ್ಗರ್ ಅಹಮದ್, ಎ. ರಾಘವೇಂದ್ರ, ವೆಂಕಟೇಶ್, ವಿಶ್ವನಾಥ್, ಜಯರಾಮಯ್ಯ, ಪಾರ್ಥ, ನಿಜಲಿಂಗಪ್ಪ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.



