ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮಂಡ್ಯ ಜಿಲ್ಲೆಯ ಸಾರ್ವಜನಿಕರ ದೀರ್ಘಕಾಲದ ಬೇಡಿಕೆಯಾಗಿದ್ದ 'ಆಧಾರ್ ಸೇವಾ ಕೇಂದ್ರ' ಸ್ಥಾಪನೆಯ ಕನಸು ನನಸಾಗುತ್ತಿದೆ. ಮಂಡ್ಯದಲ್ಲಿ ಶೀಘ್ರದಲ್ಲೇ ನೂತನ ಆಧಾರ್ ಸೇವಾ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು, ಮಂಡ್ಯ ಸಂಸದ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಅಧಿಕೃತವಾಗಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ಡಿಜಿಟಲ್ ಇಂಡಿಯಾ' ದೂರದೃಷ್ಟಿಯಂತೆ ನಾಗರಿಕ ಸೇವೆಗಳನ್ನು ತ್ವರಿತವಾಗಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿದೆ.
ಕುಮಾರಸ್ವಾಮಿ ಅವರ ಶ್ರಮಕ್ಕೆ ಸಿಕ್ಕ ಫಲ:
ಮಂಡ್ಯ ಜಿಲ್ಲೆಯಲ್ಲಿ ಆಧಾರ್ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆಗಳು ವಿಳಂಬವಾಗುತ್ತಿದ್ದು, ವಿದ್ಯಾರ್ಥಿಗಳು, ರೈತರು, ಹಿರಿಯ ನಾಗರಿಕರು ಹಾಗೂ ನೆರವು ನಗದು ವರ್ಗಾವಣೆ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ಅಶ್ವಿನಿ ವೈಷ್ಣವ್ ಅವರನ್ನು ಖುದ್ದಾಗಿ ಭೇಟಿಯಾಗಿ, ಜಿಲ್ಲೆಯಲ್ಲಿ ಶಾಶ್ವತ ಆಧಾರ್ ಸೇವಾ ಕೇಂದ್ರ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದರು.
೪ ಹೊಸ ಕಿಟ್‌ಗಳೊಂದಿಗೆ ಆಧಾರ್ ಸೇವಾ ಕೇಂದ್ರ:
ಪ್ರಸ್ತುತ ಮಂಡ್ಯ ಜಿಲ್ಲೆಯಲ್ಲಿ 110 ಕಾರ್ಯಾಚರಣಾ ಕಿಟ್‌ಗಳ ಮೂಲಕ ಆಧಾರ್ ಸೇವೆ ಒದಗಿಸಲಾಗುತ್ತಿದೆ. ಇದೀಗ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಂಡ್ಯದಲ್ಲಿ ನಾಲ್ಕು ವಿಶೇಷ ದಾಖಲಾತಿ ಕಿಟ್‌ಗಳುಳ್ಳ ಪ್ರತ್ಯೇಕ ಆಧಾರ್ ಸೇವಾ ಕೇಂದ್ರ ತೆರೆಯಲು ನಿರ್ಧರಿಸಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಭಾಗದ ಸಾವಿರಾರು ಜನರಿಗೆ ತಕ್ಷಣದ ಸೇವೆ ಲಭ್ಯವಾಗಲಿದೆ.
ಹೆಚ್.ಡಿ. ಕುಮಾರಸ್ವಾಮಿ ಕೃತಜ್ಞತೆ:
"ಸಕ್ಕರೆನಾಡಿನ ಜನರ ಬೇಡಿಕೆಗೆ ತಕ್ಷಣ ಸ್ಪಂದಿಸಿ ಆಧಾರ್ ಸೇವಾ ಕೇಂದ್ರ ಮಂಜೂರು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳು ಹಾಗೂ ತಕ್ಷಣವೇ ಕ್ರಮ ಕೈಗೊಂಡ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳು. ಇದು ಮಂಡ್ಯ ಜಿಲ್ಲೆಯ ಜನರಿಗೆ ನಿಜಕ್ಕೂ ವರದಾನವಾಗಲಿದೆ." ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರು.



