ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿಶ್ವಮಟ್ಟದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಎತ್ತಿಹಿಡಿಯುವಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಪಾತ್ರ ಹಾಗೂ ಸೇವೆ ಅತ್ಯಂತ ಮಾದರಿಯಾಗಿದೆ ಎಂದು ಯೂಥ್ ರೆಡ್‌ಕ್ರಾಸ್ ಘಟಕದ ಸಂಯೋಜಕಿ ಶಶಿಕಲಾ ರವಿಶಂಕರ್ ಹೇಳಿದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ತಾಲ್ಲೂಕು ಘಟಕ, ಯೂಥ್ ರೆಡ್‌ಕ್ರಾಸ್ ಘಟಕ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ 'ಜಿನೀವಾ ಒಪ್ಪಂದ ದಿನಾಚರಣೆ'ಯ ಅಂಗವಾಗಿ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಾಮಾಜಿಕ ಅರಿವು ಮತ್ತು ಜಾಥಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿಶ್ವದ ಇತಿಹಾಸದಲ್ಲಿ ಮಾನವೀಯ ಬದುಕು ಹಾಗೂ ಸಾಧನೆಗಳು ಸದಾ ಜೀವಂತವಾಗಿರುತ್ತವೆ. ಜಿನೀವಾ ಒಪ್ಪಂದದ ಸಂದರ್ಭದಲ್ಲಿ ಮಿತ್ರ-ಶತ್ರು ಎಂಬ ಭೇದಭಾವವಿಲ್ಲದೆ, ಯುದ್ಧದ ಸಾವು-ನೋವಿನ ನಡುವೆ ಸ್ವಯಂಪ್ರೇರಿತರಾಗಿ ವೈದ್ಯಕೀಯ ನೆರವು ನೀಡಿದ ಜೀನ್ ಹೆನ್ರಿ ಡ್ಯೂನಾಂಟ್ ಅವರ ಮಾನವೀಯ ಸೇವೆ ವಿಶ್ವಕ್ಕೇ ಮಾದರಿಯಾಗಿದೆ. ಅವರ ಸ್ಮರಣಾರ್ಥವಾಗಿಯೇ ಜಗತ್ತಿನಾದ್ಯಂತ ರೆಡ್‌ಕ್ರಾಸ್ ಸಂಸ್ಥೆ ಕಾರ್ಯಾಚರಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ತಾಲ್ಲೂಕು ಚೇರ್ಮನ್ ರಾಧಾ ಎಚ್.ಎಸ್. ಸುಂದರ್‌ರಾಜ್ ಸಂಸ್ಥೆಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಬಿ.ಆರ್. ಹೇಮಲತಾ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯ ಮೂಲ ಉದ್ದೇಶ ಮತ್ತು ಗುರಿಗಳು ಸಮಾಜಮುಖಿ ಹಾಗೂ ಪ್ರಗತಿಪರ ಚಿಂತನೆಗಳಿಗೆ ಪ್ರೇರಣೆಯಾಗಿವೆ ಎಂದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್. ರಾಘವೇಂದ್ರ, ರಾಜ್ಯ ಸಮಿತಿ ಸದಸ್ಯ ಅನಂತರಾಮ್, ಪ್ರೊ. ಬಿ.ಕೆ. ನಾಗಣ್ಣ, ಬಸವರಾಜ್ ಟಿ. ಬೆಳಗಟ್ಟಿ, ಬಿ.ಟಿ. ಭರತ್, ಎಸ್.ಎಂ. ವೀರೇಶ್, ಡಾ. ಎ. ದೇವಿಕಾ, ಮಹಮದ್ ಸಾದತ್, ನರಸಿಂಹಮೂರ್ತಿ, ಎಚ್.ಎಸ್. ಚಂದ್ರವದನ, ಎಂ.ವಿ. ನಾಗರತ್ನಮ್ಮ, ಸರೋಜಮ್ಮ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



