ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2026-27ನೇ ಸಾಲಿನ ಮುಂಗಾರು ಹಂಗಾಮಿಗೆ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ’ಯಡಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಜಿಲ್ಲೆಯಲ್ಲಿ ಬಿರುಸಿನಿಂದ ಸಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕ್ಷೀಣಿಸಿರುವುದರಿಂದ ರೈತರು ವಿಮೆ ಮಾಡಿಸುವ ಮೂಲಕ ಬೆಳೆ ನಷ್ಟದ ಆತಂಕದಿಂದ ಪಾರಾಗಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಕರೆ ನೀಡಿದ್ದಾರೆ.
ತಾಲೂಕುವಾರು ನೋಂದಣಿ ವಿವರ (ಜುಲೈ 21ರ ಅಂಕಿಅಂಶ)
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 3,02,505 ರೈತರಿದ್ದು, ಈವರೆಗೆ 44,105 ರೈತರು ಮಾತ್ರ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ.
|
ತಾಲೂಕು |
ಒಟ್ಟು ರೈತರು |
ವಿಮೆ ನೋಂದಾಯಿಸಿದ ರೈತರು |
|
ಚಳ್ಳಕೆರೆ |
64,476 |
13,337 |
|
ಚಿತ್ರದುರ್ಗ |
58,850 |
11,925 |
|
ಹಿರಿಯೂರು |
55,745 |
7,062 |
|
ಹೊಳಲ್ಕೆರೆ |
48,708 |
5,040 |
|
ಮೊಳಕಾಲ್ಮೂರು |
22,448 |
3,926 |
|
ಹೊಸದುರ್ಗ |
52,278 |
2,815 |
ಬೆಳೆ ಮಾರ್ಪಾಡಿಗೆ ನಿಯಮಗಳು
ಸಾಲ ಪಡೆದ ರೈತರು: ಬ್ಯಾಂಕ್‌ನಲ್ಲಿ ನಮೂದಿಸಿದ ಬೆಳೆಗಿಂತ ಬೇರೆ ಬೆಳೆ ಬಿತ್ತನೆ ಮಾಡಿದ್ದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಿಯಮಿತ ಅವಧಿಯೊಳಗೆ 'ಬಿತ್ತನೆ ದೃಢೀಕರಣ ಪತ್ರ' ನೀಡಿ ಬೆಳೆಯನ್ನು ಬದಲಾಯಿಸಿಕೊಳ್ಳಬಹುದು.
· ಸಾಲ ಪಡೆಯದ ರೈತರು: ವಿಮೆ ನೋಂದಣಿ ನಂತರ ಬೇರೆ ಬೆಳೆ ಬಿತ್ತಿದ್ದಲ್ಲಿ, ಸಂಬಂಧಪಟ್ಟ ಆರ್ಥಿಕ ಸಂಸ್ಥೆಗಳಿಗೆ ಮಾಹಿತಿ ನೀಡಿ ವಿಮೆ ವಿವರ ತಿದ್ದುಪಡಿ ಮಾಡಿಕೊಳ್ಳಬೇಕು.
· ವಿಮಾ ಕಂತು: ಬೆಳೆ ಬದಲಾವಣೆಯಿಂದ ವ್ಯತ್ಯಾಸವಾಗುವ ವಿಮಾ ಕಂತಿನ ಮೊತ್ತವನ್ನು (ಹೆಚ್ಚಿದ್ದರೆ ರೈತರು ಪಾವತಿಸಬೇಕು, ಕಡಿಮೆಯಿದ್ದರೆ ಸಂಸ್ಥೆಯಿಂದ ಮರುಪಾವತಿ ಪಡೆಯಬಹುದು) ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶವಿದೆ.
ಜಿಲ್ಲಾಧಿಕಾರಿಗಳ ಎಚ್ಚರಿಕೆ:
"ಕೊನೆಗಳಿಗೆಯಲ್ಲಿ ಅರ್ಜಿ ಸಲ್ಲಿಸಲು ಮುಗಿಬಿದ್ದರೆ ತಾಂತ್ರಿಕ ತೊಂದರೆಗಳು ಹಾಗೂ ತಪ್ಪುಗಳು ಸಂಭವಿಸಿ, ವಿಮೆ ಪರಿಹಾರ ಕೈತಪ್ಪುವ ಸಾಧ್ಯತೆಯಿರುತ್ತದೆ. ಆದ್ದರಿಂದ ಕೊನೆಯ ದಿನದವರೆಗೆ ಕಾಯದೆ ತಕ್ಷಣವೇ ಹತ್ತಿರದ ಸಂಸ್ಥೆಗಳಲ್ಲಿ ನೋಂದಣಿ ಮಾಡಿಕೊಂಡು ಯೋಜನೆಯ ಲಾಭ ಪಡೆಯಿರಿ."



