ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ, ಸಂಕಷ್ಟದಲ್ಲಿರುವ ರೈತರು ಹಾಗೂ ಜನಸಾಮಾನ್ಯರಿಗೆ ಅಗತ್ಯ ನೆರವು ಒದಗಿಸಲು ರಾಜ್ಯ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್ ನಿಯಮಗಳನ್ನು ಸಡಿಲಿಸಿ, ಕೂಡಲೇ ಅಗತ್ಯ ಆರ್ಥಿಕ ನೆರವು ಬಿಡುಗಡೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ಆಗ್ರಹಿಸಿದರು.
ಕೇಂದ್ರ ಸರ್ಕಾರದ ಪ್ರಸ್ತುತ ಮಾನದಂಡಗಳು ರಾಜ್ಯದ ವಾಸ್ತವಿಕ ಬರ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ನಿಯಮಗಳನ್ನು ಸಡಿಲಿಸುವಂತೆ ಕೋರಿ ರಾಜ್ಯ ಸರ್ಕಾರದಿಂದ ಈಗಾಗಲೇ ಕೇಂದ್ರಕ್ಕೆ ಹಲವು ಪತ್ರಗಳನ್ನು ಬರೆಯಲಾಗಿದೆ. ಬರ ಪರಿಸ್ಥಿತಿಯ ವಾಸ್ತವಾಂಶಗಳನ್ನು ಕೇಂದ್ರದ ಗಮನಕ್ಕೆ ತರಲಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಪರಿಹಾರ ದೊರೆಯುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
2023ರಲ್ಲಿ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಅಂದಿನಿಂದಲೂ ಸಿದ್ದರಾಮಯ್ಯ ಹಾಗೂ ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಸರ್ಕಾರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ನಿರಂತರವಾಗಿ ಪತ್ರಗಳನ್ನು ಬರೆಯಲಾಗಿದೆ. ಕಂದಾಯ ಸಚಿವನಾಗಿ ತಾವು ಸ್ವತಃ ಕೇಂದ್ರಕ್ಕೆ ಮನವಿ ಮಾಡಿದ್ದಲ್ಲದೆ, ಮುಖ್ಯ ಕಾರ್ಯದರ್ಶಿಗಳೂ ಸಹ ಪತ್ರ ಬರೆದು ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ರಾಜ್ಯದ ಪ್ರಮುಖ ಬೇಡಿಕೆಗಳು: ಕೇವಲ ಸಾಮಾನ್ಯ ಮಳೆಯ ಕೊರತೆಯ ಆಧಾರದ ಮೇಲೆ ಮಾತ್ರ ಬರವನ್ನು ಅಳೆಯಬಾರದು.
ಮಳೆಯ ಪ್ರಮಾಣ, ಮಳೆ ಬಿದ್ದ ಸಮಯ, ಬೆಳೆಗಳ ಮೇಲಾದ ದುಷ್ಪರಿಣಾಮ ಮತ್ತು ಮಣ್ಣಿನ ತೇವಾಂಶದಂತಹ ಸ್ಥಳೀಯ ವಾಸ್ತವಾಂಶಗಳನ್ನು ಪರಿಗಣಿಸಬೇಕು.
ಮುಂದುವರಿದು, 2026ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರದ ಮಾನದಂಡಗಳನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ರೈತರು ಹಾಗೂ ಜನರ ಸಂಕಷ್ಟಕ್ಕೆ ಸ್ಪಂದಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರವೂ ಕೂಡ ರಾಜಕೀಯ ಬದಿಗಿಟ್ಟು, ರಾಜ್ಯದ ವಾಸ್ತವಿಕ ಪರಿಸ್ಥಿತಿಯನ್ನು ವಿಶೇಷವಾಗಿ ಪರಿಗಣಿಸಿ ಅಗತ್ಯವಿರುವ ಸಂಪೂರ್ಣ ಆರ್ಥಿಕ ನೆರವು ನೀಡಬೇಕು ಎಂದು ಡಾ. ಜಿ. ಪರಮೇಶ್ವರ್ ಕಳಕಳಿಯ ಮನವಿ ಮಾಡಿದರು.




