ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯ ಬಸವನಗುಡಿಯಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯ ಸಂದರ್ಭದಲ್ಲಿ ಎರಡು ಕೋಮಿನ ಗುಂಪುಗಳ ನಡುವೆ ಗಲಾಟೆ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಎಫ್‌ಐಆರ್ (FIR) ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಮೂರು ಪ್ರತ್ಯೇಕ ಪ್ರಕರಣಗಳ ವಿವರ: ಮೊದಲನೇ ಪ್ರಕರಣ: ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದಡಿ ಅಬ್ದುಲ್ ರಜಾಕ್ ಎಂಬವರು ನೀಡಿದ ದೂರಿನಂತೆ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ, ಗೋಪಿಗೌಡ ಹಾಗೂ ವಿನೋದ್ ನಾಯಕ್ ಅವರನ್ನು ಬಂಧಿಸಲಾಗಿದೆ.
ಎರಡನೇ ಪ್ರಕರಣ: ಪುನೀತ್ ಕೆರೆಹಳ್ಳಿ ನೀಡಿದ ದೂರಿನ ಮೇರೆಗೆ ಕೊಲೆಯತ್ನ ಹಾಗೂ SC-ST ದೌರ್ಜನ್ಯ ತಡೆ ಕಾಯ್ದೆಯಡಿ ಅಕ್ಮಲ್ ಪಾಷಾ, ಅಬೂಬಕರ್ ಮತ್ತು ಸೈಯದ್ ಅವರನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದು ಬಾಲ ನ್ಯಾಯಮಂಡಳಿಗೆ ಒಪ್ಪಿಸಲಾಗಿದೆ.
ಮೂರನೇ ಪ್ರಕರಣ: ಸಾರ್ವಜನಿಕ ರಸ್ತೆ ತಡೆದು ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಸವನಗುಡಿ ಸಂಚಾರ ಠಾಣೆಯ ಹೆಡ್ ಕಾನ್ಸ್‌ಸ್ಟೇಬಲ್ ಮಂಜುನಾಥ್ ನೀಡಿದ ದೂರಿನ ಮೇರೆಗೆ ಪುನೀತ್ ಕೆರೆಹಳ್ಳಿ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಡೆದಿದ್ದೇನು?: ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಬಸವನಗುಡಿಯ ಕೆ.ಆರ್. ರಸ್ತೆ ಬಳಿ ಬನಶಂಕರಿಯಿಂದ ಬಂದ ಗುಂಪೊಂದು ಈದ್ ಮಿಲಾದ್ ಮೆರವಣಿಗೆ ನಡೆಸುತ್ತಿತ್ತು. ಈ ವೇಳೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹಾಗೂ ಅವರ ಬೆಂಬಲಿಗರು ಧ್ವಜ ಹಿಡಿದು ಎದುರಾಗಿ ಘೋಷಣೆ ಕೂಗುತ್ತಾ ಬಂದಿದ್ದಾರೆ. ಇದರಿಂದ ಪ್ರಚೋದನೆಗೊಂಡ ಮೆರವಣಿಗೆಯಲ್ಲಿದ್ದ ಗುಂಪು ಮಾತಿನ ಚಕಮಕಿಗಿಳಿದು, ಗಲಾಟೆ ತಾರಕಕ್ಕೇರಿ ಮುರುಳಿ ಎಂಬವರ ಮೇಲೆ ಹಲ್ಲೆ ನಡೆಸಿದೆ. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಶಾಂತಿ ಕಾಪಾಡಲು ಡಿಸಿಪಿ ಮನವಿ: ಘಟನೆಯ ಬಳಿಕ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಕುರಿತು ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ವಂಶಿಕೃಷ್ಣ, "ಸಾರ್ವಜನಿಕರು ಯಾವುದೇ ಪ್ರಚೋದನಕಾರಿ ವದಂತಿಗಳಿಗೆ ಕಿವಿಗೊಡದೆ ಶಾಂತಿ ಮತ್ತು ಸೌಹಾರ್ದತೆ ಕಾಯ್ದುಕೊಳ್ಳಬೇಕು. ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು" ಎಂದು ಮನವಿ ಮಾಡಿದ್ದಾರೆ.




