ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಗತ್ತಿಗೆ ಸಮಾನತೆ, ಮಾನವೀಯತೆ, ಸೌಹಾರ್ದತೆ ಹಾಗೂ ಜಾತಿ ರಹಿತ ಸಮಾಜದ ಮಹಾನ್ ಸಂದೇಶವನ್ನು ಸಾರಿದ ಸಂತ ರವಿದಾಸರ ಜಯಂತಿಯ ಅಂಗವಾಗಿ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಶ್ರದ್ಧಾ-ಭಕ್ತಿ ಹಾಗೂ ಅದ್ದೂರಿಯಿಂದ ಭಾವಚಿತ್ರ ಮೆರವಣಿಗೆ ನಡೆಯಿತು.
ಬೆಂಗಳೂರಿನ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯ ಕಾರ್ಯಾಲಯದಿಂದ ಆರಂಭವಾದ ಮೆರವಣಿಗೆಯು ಐತಿಹಾಸಿಕ ಕಾಡು ಮಲ್ಲೇಶ್ವರ ದೇವಾಲಯದವರೆಗೆ ಸಾಗಿತು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂತ ರವಿದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ದಿವ್ಯ ಸಂದೇಶಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ. ರವಿ ಅವರು, "ಸಂತ ರವಿದಾಸರು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪ್ರತಿಪಾದಿಸಿದವರು. ಸಮಾಜದಲ್ಲಿನ ಜಾತಿ ಭೇದ-ಭಾವಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದ ಅವರು, ಎಲ್ಲರನ್ನೂ ಸಮಾನವಾಗಿ ಕಾಣುವ ಸೌಹಾರ್ದತೆಯ ಮಾರ್ಗವನ್ನು ತೋರಿಸಿದ್ದಾರೆ," ಎಂದು ಗೌರವ ನಮನ ಸಲ್ಲಿಸಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಎಸ್.ಸಿ. ಮೋರ್ಚಾ ಅಧ್ಯಕ್ಷ ಹಾಗೂ ಶಾಸಕರಾದ ಸಿಮೆಂಟ್ ಮಂಜು, ಶಾಸಕ ಬಸವರಾಜ ಮತ್ತಿಮೂಡ್, ಮಾಜಿ ಸಚಿವ ಎನ್. ಮಹೇಶ್ ಸೇರಿದಂತೆ ಹಲವಾರು ಪ್ರಮುಖ ನಾಯಕರು, ಮುಖಂಡರು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.



