ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಹಾಗೂ ಸಚಿವರ ನಡುವಿನ ಒಳಜಗಳದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇ.ಡಿಗೆ ದೂರು ನೀಡಿದವರ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ "ನನ್ನನ್ನು ರಾಜಕೀಯವಾಗಿ ಕುಗ್ಗಿಸಲು ಸ್ವಪಕ್ಷದವರೇ ಈ ಹುನ್ನಾರ ನಡೆಸಿದ್ದಾರೆಯೇ ಎಂದು ಹುಡುಕುತ್ತಿದ್ದೇನೆ" ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಅಶೋಕ್ ಕಾಂಗ್ರೆಸ್ ಆಡಳಿತದ ವೈಫಲ್ಯಗಳನ್ನು ಎತ್ತಿ ತೋರಿಸಿದ್ದಾರೆ.
ಬಟಾಬಯಲಾದ ಒಳಜಗಳ: ಸಚಿವರುಗಳೇ ತಮ್ಮ ವಿರುದ್ಧವೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಕಾಂಗ್ರೆಸ್‌ನ ಬೂದಿ ಮುಚ್ಚಿದ ಕೆಂಡದಂತಿರುವ ಆಂತರಿಕ ಕಾಳಗವನ್ನು ಜಗಜ್ಜಾಹೀರುಗೊಳಿಸಿದೆ.
ಅಧಿಕಾರಕ್ಕಾಗಿ ಕುತಂತ್ರ: ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡಿ ವಿದೇಶಗಳಲ್ಲಿ ಹೂಡಿಕೆ ಮಾಡಲಾಗುತ್ತಿದ್ದು, ಸ್ವಪಕ್ಷದವರನ್ನೇ ತುಳಿದು ಅಧಿಕಾರ ಹಿಡಿಯಲು ನಾಯಕರು ನಿರಂತರ ಸಂಚು ರೂಪಿಸುತ್ತಿದ್ದಾರೆ.
ಇ.ಡಿಗೆ ದೂರು ನೀಡುವ ಹಂತ: ಕಾಂಗ್ರೆಸ್ ನಾಯಕರು ತಮ್ಮದೇ ಸಚಿವರ ಭ್ರಷ್ಟಾಚಾರದ ಜಾತಕವನ್ನು ತನಿಖಾ ಸಂಸ್ಥೆಗಳಿಗೆ ನೀಡುವ ಹಂತಕ್ಕೆ ತಲುಪಿರುವುದು ಸರ್ಕಾರದ ನೈತಿಕ ಕುಸಿತಕ್ಕೆ ಸಾಕ್ಷಿಯಾಗಿದೆ.
ಅಭಿವೃದ್ಧಿ ಶೂನ್ಯ: ಜನತೆಗೆ ನೀಡಿದ್ದ ಅಭಿವೃದ್ಧಿಯ ಆಶ್ವಾಸನೆಗಳು ಗಾಳಿಯಲ್ಲಿ ತೂರಿಹೋಗಿದ್ದು, ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಸಚಿವರ ಕಾಲೆಳೆಯುವ ತಂತ್ರಗಳಲ್ಲೇ ಸರ್ಕಾರ ಮುಳುಗಿದೆ.
ಸಾರ್ವಜನಿಕರ ಹಿತಾಸಕ್ತಿಯನ್ನು ಬಲಿಕೊಟ್ಟು ಕೇವಲ ಲೂಟಿ ಮತ್ತು ಅಧಿಕಾರದ ಪೈಪೋಟಿಗಾಗಿ ಕಿತ್ತಾಡುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.




