ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಶಿರವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅವರಣದಲ್ಲಿ ( ಆರ್ ಎ ಡಬ್ಲ್ಯೂ ಇ ಪಿ.) ಕಾರ್ಯಕ್ರಮದಲ್ಲಿ ಮಣ್ಣಿನ ಮಾದರಿ ಸಂಗ್ರಹಣೆ ಹಾಗೂ ಮಣ್ಣಿನ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ನಮ್ಮ ವಿಶ್ವವಿದ್ಯಾಲಯದ ವತಿಯಿಂದ ರೈತರ ಜಮೀನುಗಳಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಮಣ್ಣಿನ ಪರೀಕ್ಷೆಗೆ ಕಳುಹಿಸಲಾಯಿತು. ಮಣ್ಣಿನ ಫಲವತ್ತತೆಯನ್ನು ತಿಳಿದುಕೊಂಡು ಬೆಳೆಗಳಿಗೆ ಅಗತ್ಯವಾದ ಗೊಬ್ಬರಗಳನ್ನು ವೈಜ್ಞಾನಿಕವಾಗಿ ಶಿಫಾರಸು ಮಾಡುವ ಉದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಯಿತು.
ನಮ್ಮ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ವಿಭಾಗದ ಡಾ. ಪ್ರೀತು ಅವರು ಮಾತನಾಡಿ ರೈತರಿಗೆ ಮಣ್ಣಿನ ಮಾದರಿಯನ್ನು ಸರಿಯಾದ ರೀತಿಯಲ್ಲಿ ಹೇಗೆ ಸಂಗ್ರಹಿಸಬೇಕು, ಮಣ್ಣಿನ ಪರೀಕ್ಷೆಯ ಮಹತ್ವ, ಮಣ್ಣಿನ ಪರೀಕ್ಷೆಯಿಂದ ದೊರೆಯುವ ಪ್ರಯೋಜನಗಳು ಹಾಗೂ ಸಮತೋಲನ ಗೊಬ್ಬರ ನಿರ್ವಹಣೆಯ ಬಗ್ಗೆ ವಿವರವಾಗಿ ತಿಳಿಸಿದರು.
ಬೀಜ ವಿಜ್ಞಾನ ವಿಭಾಗದ ಡಾ. ಸಿದ್ದರಾಜು ಅವರು ಮಾತನಾಡಿ ಉತ್ತಮ ಗುಣಮಟ್ಟದ ಪ್ರಮಾಣಿತ ಬೀಜಗಳ ಬಳಕೆ, ಹೊಸ ತಳಿಗಳ ಪರಿಚಯ, ರೋಗ ನಿರೋಧಕ ಹಾಗೂ ರೋಗಕ್ಕೆ ತುತ್ತಾಗುವ ತಳಿಗಳು, ಉತ್ತಮ ಬೀಜಗಳ ಆಯ್ಕೆ, ಬೀಜ ಸಂಸ್ಕರಣೆ ಹಾಗೂ ಉತ್ತಮ ಬೆಳೆ ಉತ್ಪಾದನೆಗೆ ಅಗತ್ಯವಾದ ವಿವಿಧ ಮಾಹಿತಿಗಳನ್ನು ರೈತರಿಗೆ ವಿವರಿಸಿದರು.
RAWEP ಉಸ್ತುವಾರಿ ಅಧಿಕಾರಿ ಡಾ. ಸವಿತಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ರೈತರು ಮಣ್ಣಿನ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳಬೇಕು ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರಿಗೆ ಮಣ್ಣಿನ ಆರೋಗ್ಯ, ಸಮತೋಲನ ಪೋಷಕಾಂಶ ನಿರ್ವಹಣೆ, ಉತ್ತಮ ಬೀಜಗಳ ಆಯ್ಕೆ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸುವಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಅನೇಕ ರೈತರು ಗ್ರಾಮಸ್ಥರು ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.



