ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿಯ ಯದ್ದಲಹಳ್ಳಿ ಸಮೀಪದ ಶ್ರೀರಂಗವನದಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನಡೆದವು.
ಜನ್ಮಾಷ್ಟಮಿ ಪ್ರಯುಕ್ತ ರುಕ್ಮಿಣಿ -ಸತ್ಯಭಾಮಾ ಸಮೇತ ಶ್ರೀ ವೇಣುಗೋಪಾಲಸ್ವಾಮಿಗೆ ಕ್ಷೀರಾಭಿಷೇಕ, ಮಹಾಭಿಷೇಕ, ಅಷ್ಟಗಂಧ ಅರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣ ಪೂರ್ವಕ ತುಳಸಿ ಅರ್ಚನೆ ಹಾಗೂ ಮಹಾನೈವೇದ್ಯ ಸಮರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ದೇವಸ್ಥಾನ ಜೀರ್ಣೋದ್ಧಾರ ಮಂಡಳಿಯ ಸತ್ಯನಾರಾಯಣಪ್ಪ ಮಾತನಾಡಿ, ಸುಮಾರು ಎರಡು ದಶಕಗಳ ಹಿಂದೆ ನಿರ್ಮಾಣ ಗೊಂಡಿರುವ ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ರುಕ್ಮಿಣಿ ಸತ್ಯಭಾಮಾ ಸಮೇತ ಶ್ರೀ ವೇಣುಗೋಪಾಲಕೃಷ್ಣನ ವಿಗ್ರಹವು ವಿಶೇಷ ಮಹತ್ವ ಹೊಂದಿದ್ದು, ಈ ಭಾಗದ ಭಕ್ತರ ಆರಾಧ್ಯ ದೈವವಾಗಿ ಪೂಜಿಸಲ್ಪಡುತ್ತಿದೆ ಎಂದು ಹೇಳಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಗಮಿಸಿದ್ದ ಭಕ್ತರು ಹಣ್ಣು-ಕಾಯಿ ಸೇವೆ, ಬೆಣ್ಣೆ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಸಮರ್ಪಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಆಕರ್ಷಕ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದ ಶ್ರೀ ವೇಣುಗೋಪಾಲಸ್ವಾಮಿಯ ದರ್ಶನ ಪಡೆದ ಪುನೀತರಾದರು.
ದೇವಾಲಯದಿಂದ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀರಂಗವನದ ಶಶಿಧರ್, ದೇವಾಲಯದ ಅರ್ಚಕರಾದ ನವೀನ್ ಸುತ್ತಮುತ್ತಲಿನ ಗ್ರಾಮಸ್ಥರು, ಶಾಲಾಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.




