ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಪ್ರಮುಖ ಜಲಾಶಯಗಳ ಭದ್ರತೆ, ನೀರಿನ ಸಂಗ್ರಹ ಹಾಗೂ ತಾಂತ್ರಿಕ ವಿವರಗಳನ್ನು ಒಳಗೊಂಡಿದ್ದ 'ಅಣೆಕಟ್ಟು ಸುರಕ್ಷತಾ ಸಂಸ್ಥೆ' ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಇಲಾಖಾ ವೆಬ್‌ಸೈಟ್‌ಗಳನ್ನು ಸೈಬರ್ ವಂಚಕರು ಹ್ಯಾಕ್ ಮಾಡಿ, ಗೌಪ್ಯ ದತ್ತಾಂಶಗಳನ್ನು ಕಳವು ಮಾಡಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಅಣೆಕಟ್ಟು ಸುರಕ್ಷತಾ ಸಂಸ್ಥೆ ಹಾಗೂ ಅಣೆಕಟ್ಟು ಪುನಶ್ಚೇತನ ಮತ್ತು ಸುಧಾರಣಾ ಯೋಜನೆಯ ರಾಜ್ಯ ಯೋಜನಾ ನಿರ್ವಹಣಾ ಘಟಕದ ವೆಬ್‌ಸೈಟ್‌ಗಳು ಹ್ಯಾಕ್ ಆಗಿರುವ ಕುರಿತು ಸಂಸ್ಥೆಯ ಮುಖ್ಯ ಎಂಜಿನಿಯರ್ ಕಚೇರಿಯ ಅಧಿಕಾರಿಗಳು ಸೈಬರ್ ಕಮಾಂಡ್ ಸೆಂಟರ್‌ಗೆ ಅಧಿಕೃತ ದೂರು ನೀಡಿದ್ದಾರೆ.
ವಿದೇಶಗಳಿಂದ ಸೈಬರ್ ದಾಳಿ ಶಂಕೆ:
ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗೆ ಸಂಬಂಧಿಸಿದ ಅಧಿಕೃತ ಐಪಿ ವಿಳಾಸಗಳಿಗೆ ಅಪರಿಚಿತ ಐಪಿ ವಿಳಾಸಗಳ ಮೂಲಕ ಅಕ್ರಮವಾಗಿ ಪ್ರವೇಶ ಪಡೆದು ಈ ದತ್ತಾಂಶಗಳನ್ನು ಕಳವು ಮಾಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಮೆರಿಕ ಅಥವಾ ಬ್ರಿಟನ್ ಭಾಗದ ನೆಟ್‌ವರ್ಕ್‌ಗಳನ್ನು ಬಳಸಿ ಈ ಸೈಬರ್ ದಾಳಿ ನಡೆಸಿರುವ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.
ಜಲಾಶಯಗಳ ಭದ್ರತೆಗೆ ಭೀತಿ – ದತ್ತಾಂಶ ಮಾರಾಟದ ಶಂಕೆ:
ರಾಜ್ಯದ ಕೆಆರ್‌ಎಸ್, ಲಿಂಗನಮಕ್ಕಿ, ತುಂಗಾಭದ್ರಾ, ಭದ್ರಾ, ವರಾಹಿ, ಹಾರಂಗಿ, ಹೇಮಾವತಿ ಸೇರಿದಂತೆ ಪ್ರಮುಖ ಜಲಾಶಯಗಳ ಒಳಹರಿವು, ಹೊರಹರಿವು, ಕ್ರಸ್ಟ್‌ಗೇಟ್‌ಗಳ ಕಾರ್ಯವಿಧಾನ, ಜಲಾನಯನ ಪ್ರದೇಶ ಹಾಗೂ ಅತ್ಯಂತ ಗೌಪ್ಯವಾದ ಭದ್ರತಾ ವಿವರಗಳು ಈ ವೆಬ್‌ಸೈಟ್‌ಗಳಲ್ಲಿದ್ದವು.
ಹ್ಯಾಕ್ ಮಾಡಲಾದ ಈ ಸೂಕ್ಷ್ಮ ದತ್ತಾಂಶಗಳನ್ನು ಸೈಬರ್ ಅಪರಾಧಿಗಳು ಆರ್ಥಿಕ ಲಾಭಕ್ಕಾಗಿ ದೇಶದ್ರೋಹಿ ಅಥವಾ ಸಮಾಜಘಾತುಕ ಶಕ್ತಿಗಳಿಗೆ ಮಾರಾಟ ಮಾಡುವ ಸಾಧ್ಯತೆಯಿದ್ದು, ಇದು ರಾಜ್ಯದ ಜಲಾಶಯಗಳ ಭದ್ರತೆಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮತ್ತು ಸೈಬರ್ ತಜ್ಞರು, ದಾಳಿಗೆ ಬಳಸಲಾದ ಅಪರಿಚಿತ ಐಪಿ ವಿಳಾಸಗಳು ಹಾಗೂ ಡಿಜಿಟಲ್ ಹೆಜ್ಜೆಗುರುತುಗಳ ಆಧಾರದ ಮೇಲೆ ಕೃತ್ಯದ ಹಿಂದಿರುವ ವ್ಯಕ್ತಿಗಳು ಹಾಗೂ ಜಾಲವನ್ನು ಪತ್ತೆಹಚ್ಚಲು ಕಾರ್ಯಾಚರಣೆ ಕೈಗೊಂಡಿದ್ದಾರೆ.




