ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅರಿವು ಮೂಡಿಸುವ ಉದ್ದೇಶದಿಂದ ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರ ಪ್ರಾಥಮಿಕ ಶಾಲೆಯಲ್ಲಿ ವಿನೂತನ ಪರಿಸರ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ.
ಶಾಲೆಯಲ್ಲಿ ವಿದ್ಯಾರ್ಥಿಗಳು ದಿನನಿತ್ಯ ಬಳಸುವ ಪ್ಲಾಸ್ಟಿಕ್ ಪೆನ್ನುಗಳು, ಖಾಲಿಯಾದ ಪೆನ್ ರೀಫಿಲ್‌ಗಳು, ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಬ್ರಷ್, ಮೆಂಡರ್, ಸ್ಕೆಚಸ್ ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದೆ, ಶಾಲೆಯಲ್ಲಿ ಸ್ಥಾಪಿಸಿರುವ ಪ್ಲಾಸ್ಟಿಕ್ ಬಿನ್ ನಲ್ಲಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ.
ವರ್ಷವಿಡೀ ವಿದ್ಯಾರ್ಥಿಗಳಿಂದ ಬಳಕೆಯಾಗುವ ನೂರಾರು ಪೆನ್ನುಗಳು ಪೆನ್ ರೀಫಿಲ್‌ಗಳು, ಪ್ಲಾಸ್ಟಿಕ್ ಬಾಟಲಿಗಳು, ಹಲ್ಲುಜ್ಜುವ ಬ್ರಷ್ ಸೇರಿದಂತೆ ವಿವಿಧ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರ ಜೊತೆಗೆ ಸಾಧ್ಯವಾದಷ್ಟು ಮರುಬಳಕೆ ಮತ್ತು ಮರುಸಂಸ್ಕರಣೆಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ. ಉಮೇಶ್, ಪ್ಲಾಸ್ಟಿಕ್‌ನ ಒಂದು ಸಣ್ಣ ತುಂಡನ್ನೂ ಎಲ್ಲೆಂದರಲ್ಲಿ ಎಸೆಯದಿರುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಿದರೆ, ಅದು ಮುಂದಿನ ಪೀಳಿಗೆಯ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆಯಾಗುತ್ತದೆ. ಮಕ್ಕಳು ಶಾಲೆಯಲ್ಲಿ ಕಲಿಯುವ ಪರಿಸರ ಪ್ರಜ್ಞೆಯನ್ನು ಮನೆ ಹಾಗೂ ಸಮಾಜಕ್ಕೂ ಕೊಂಡೊಯ್ಯಬೇಕು. ನಮ್ಮ ಶಾಲೆಯಷ್ಟೆ ಅಲ್ಲದೆ ಎಲ್ಲ ವಿಧದ ಶಾಲೆ ಕಾಲೇಜುಗಳಲ್ಲಿ ಈ ಅಭಿಯಾನ ನಡೆಯಬೇಕು. ನಮ್ಮ ಭೂಮಿಯನ್ನು ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಉಳಿಸಿಕೊಡಬೇಕು ಎಂದು ತಿಳಿಸಿದರು.
ಬಳಸಿ ಎಸೆಯಬೇಡಿ, ಸಂಗ್ರಹಿಸಿ ಮರುಬಳಸಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪರಿಸರ ಉಳಿಸಿ ಎಂಬ ಸಂದೇಶಗಳೊಂದಿಗೆ ವಿದ್ಯಾರ್ಥಿಗಳು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಪಾಠಪುಸ್ತಕಗಳ ಜ್ಞಾನ ಕೇವಲ ಅರಿವಿಗೆ ಸೀಮಿತವಾಗದೆ, ಪರಿಸರ ಸಂರಕ್ಷಣೆಯನ್ನು ನಿತ್ಯ ಜೀವನದ ಅಭ್ಯಾಸವನ್ನಾಗಿ ರೂಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳಲ್ಲಿ ಹೊಣೆಗಾರಿಕೆ, ಸ್ವಚ್ಛತೆ ಮತ್ತು ಪ್ರಕೃತಿಯ ಮೇಲಿನ ಪ್ರೀತಿಯನ್ನು ಬೆಳೆಸುತ್ತಿರುವ ಅಮೃತಾಪುರ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಟಿ.ಗೋವಿಂದಪ್ಪ ಮತ್ತು ಸದಸ್ಯರಾದ ಪಿ.ತಿಪ್ಪೇಸ್ವಾಮಿ, ರಂಗಸ್ವಾಮಿ, ಕಾಂತರಾಜು, ಬಸವರಾಜು, ತಿಮ್ಮಕ್ಕ, ಶಾರದಮ್ಮ ಹಾಗು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ತಾವು ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಕೈಜೋಡಿಸಲು ತೀರ್ಮಾನಿಸಿದ್ದಾರೆ.




