ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನ್ಯಾಯದಾನ ಪ್ರಕ್ರಿಯೆಯನ್ನು ಇನ್ನಷ್ಟು ಬಲಪಡಿಸುವ ಹಾಗೂ ನ್ಯಾಯಾಲಯಗಳಲ್ಲಿ ಸರ್ಕಾರದ ನಿಲುವನ್ನು ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಮುಖ್ಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯದ ಅಡ್ವೊಕೇಟ್ ಜನರಲ್, ಗೃಹ ಇಲಾಖೆ ಹಾಗೂ ಅಭಿಯೋಗ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಇಲಾಖೆಯ ಕಾರ್ಯವೈಖರಿ ಸುಧಾರಣೆಗೆ ಸಚಿವರು ನೀಡಿರುವ ಪ್ರಮುಖ ನಿರ್ದೇಶನಗಳು ಹೀಗಿವೆ:
ಪರಿಣಾಮಕಾರಿ ವಾದ ಮಂಡನೆ: ನ್ಯಾಯಾಲಯಗಳಲ್ಲಿ ಸರ್ಕಾರದ ಪರವಾಗಿ ನಡೆಯುವ ವಿವಿಧ ಮೊಕದ್ದಮೆಗಳಲ್ಲಿ ಸರ್ಕಾರದ ಹಿತಾಸಕ್ತಿಯನ್ನು ಯಾವುದೇ ಲೋಪವಿಲ್ಲದೆ ಸಮರ್ಥವಾಗಿ ಪ್ರಸ್ತುತಪಡಿಸಲು ಇಲಾಖೆ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು.
ಆರಂಭಿಕ ಹಂತದಲ್ಲೇ ಸಮನ್ವಯ: ಸರ್ಕಾರದ ಪ್ರಕರಣಗಳು ಕೇವಲ ನ್ಯಾಯಾಲಯದ ವಾದಕ್ಕೆ ಸೀಮಿತವಾಗಬಾರದು. ಪ್ರಕರಣದ ಆರಂಭಿಕ ಹಂತದಿಂದಲೇ ಸಂಬಂಧಿಸಿದ ಇಲಾಖೆಗಳು, ತನಿಖಾಧಿಕಾರಿಗಳು ಮತ್ತು ಸರ್ಕಾರಿ ವಕೀಲರ ನಡುವೆ ಸೂಕ್ತ ಸಮನ್ವಯ ಇರಬೇಕು.
ಸಮಯಕ್ಕೆ ಸರಿಯಾಗಿ ದಾಖಲೆ ಸಲ್ಲಿಕೆ: ಸರ್ಕಾರಿ ವಕೀಲರಿಗೆ ಪ್ರಕರಣದ ಸಂಪೂರ್ಣ ಹಿನ್ನೆಲೆ, ವಾಸ್ತವಾಂಶಗಳು ಮತ್ತು ಅಗತ್ಯ ದಾಖಲೆಗಳು ವಿಳಂಬವಿಲ್ಲದೆ ಲಭ್ಯವಾಗುವಂತೆ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕು.
ಶೋಷಿತರ ಪ್ರಕರಣಗಳಿಗೆ ಆದ್ಯತೆ: ಮಹಿಳೆಯರು, ಮಕ್ಕಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ತ್ವರಿತ ಕಾನೂನು ಕ್ರಮ ಹಾಗೂ ಪರಿಣಾಮಕಾರಿ ನಿರ್ವಹಣೆಗೆ ಮೊದಲ ಆದ್ಯತೆ ನೀಡಬೇಕು.




