ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಂದಿನ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಶಿಕ್ಷಕರಿಗೆ ಜ್ಞಾನವಷ್ಟೇ ಸಾಕಾಗುವುದಿಲ್ಲ. ಅಪಾರ ತಾಳ್ಮೆ, ಸಹನೆ, ನಯ-ವಿನಯ ಹಾಗೂ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವ ಗುಣವೂ ಅತ್ಯಗತ್ಯವಾಗಿದೆ ಎಂದು ಶ್ರೀ ದೇವರಾಜ್ ಅರಸ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಜೆ. ರಾಜೇಂದ್ರ ಹೇಳಿದರು.
ಶ್ರೀ ದೇವರಾಜ್ ಅರಸ್ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿನ ಶಿಕ್ಷಣ ಪದ್ಧತಿಗೂ ಇಂದಿನ ಶಿಕ್ಷಣ ಪದ್ಧತಿಗೂ ಬಹಳಷ್ಟು ವ್ಯತ್ಯಾಸವಿದೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ವಿದ್ಯಾರ್ಥಿಗಳ ಆಲೋಚನಾ ಕ್ರಮ, ಕಲಿಕೆಯ ವಿಧಾನ ಹಾಗೂ ನಿರೀಕ್ಷೆಗಳಲ್ಲಿಯೂ ಬದಲಾವಣೆಯಾಗಿದೆ. ಆದ್ದರಿಂದ ಇಂದಿನ ಶಿಕ್ಷಕರು ಮೊದಲು ‘ತಾಳ್ಮೆ’ ಎಂಬ ಪಾಠವನ್ನು ಕಲಿತು, ನಂತರ ಅದನ್ನು ತಮ್ಮ ನಡೆ-ನುಡಿಯ ಮೂಲಕ ಯುವಪೀಳಿಗೆಗೆ ಕಲಿಸುವ ಅನಿವಾರ್ಯತೆ ಇದೆ ಎಂದರು.
ವಿದ್ಯಾರ್ಥಿಗಳನ್ನು ಕೇವಲ ಪಾಠದ ಮೂಲಕ ರೂಪಿಸಲು ಸಾಧ್ಯವಿಲ್ಲ. ಪ್ರೀತಿ, ವಿಶ್ವಾಸ, ನಯವಾದ ಮಾತು ಹಾಗೂ ಉತ್ತಮ ನಡವಳಿಕೆಯ ಮೂಲಕ ಅವರಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ಶಿಕ್ಷಕರ ಮಾತು, ನಡೆ ಮತ್ತು ವ್ಯಕ್ತಿತ್ವವು ವಿದ್ಯಾರ್ಥಿಗಳ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎಂದು ತಿಳಿಸಿದರು.
ಇಂದು ಎ.ಐ. ಸೇರಿದಂತೆ ಅನೇಕ ಹೊಸ ತಂತ್ರಜ್ಞಾನಗಳು ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿವೆ. ಅವು ಕಲಿಕೆಗೆ ನೆರವಾಗುವುದರ ಜೊತೆಗೆ ಜ್ಞಾನವನ್ನು ವೇಗವಾಗಿ ಒದಗಿಸಬಲ್ಲವು. ಆದರೆ ವಿದ್ಯಾರ್ಥಿಯ ಮನಸ್ಸನ್ನು ಅರ್ಥಮಾಡಿಕೊಂಡು, ತಪ್ಪುಗಳನ್ನು ತಿದ್ದಿ, ಬದುಕಿನ ಮೌಲ್ಯಗಳನ್ನು ಕಲಿಸಿ, ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಸ್ಥಾನವನ್ನು ಯಾವುದೇ ತಂತ್ರಜ್ಞಾನವೂ ಸಂಪೂರ್ಣವಾಗಿ ತುಂಬಲು ಸಾಧ್ಯವಿಲ್ಲ.
ಎಷ್ಟೇ ಎ.ಐ ಬಂದರೂ, ಎಷ್ಟೇ ತಂತ್ರಜ್ಞಾನ ಬೆಳೆದರೂ ಶಿಕ್ಷಕರೇ ಶಿಕ್ಷಣದ ಮೂಲ, ಮಾರ್ಗದರ್ಶಕರು ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರ್ನಿಂಗ್ ಸಮಿತಿಯ ಸದಸ್ಯರಾದ ವಿದ್ವತ್, ಉತ್ತಮ್ ಕುಮಾರ್ ಎನ್, ಪ್ರಾಂಶುಪಾಲರಾದ ಧನಂಜಯ್, ಡಾ. ಗೌರಪ್ಪ, ಡಾ. ಚಿಕ್ಕಣ್ಣ, ಜಿಯಾ ವುಲ್ಲಾಖಾನ್, ಉಪಪ್ರಾಂಶುಪಾಲರಾದ ದಕ್ಷಿಣಮೂರ್ತಿ, ಮ್ಯಾನೇಜರ್ ರವಿಕುಮಾರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.




