ಚಂದ್ರವಳ್ಳಿ ನ್ಯೂಸ್, ಕಾನ್ಪುರ:
ಉತ್ತರ ಪ್ರದೇಶದ ಕಾನ್ಪುರ ನಗರದ ಬಳಿ ಗಂಗಾ ನದಿಯ ದಡದಲ್ಲಿ ಗುರುವಾರ ಬೆಳಿಗ್ಗೆ ತರಬೇತಿ ವಿಮಾನವೊಂದು ಪತನಗೊಂಡು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಕರ್ನಾಟಕ ಮೂಲದ ಶಿಕ್ಷಣಾರ್ಥಿ ಪೈಲಟ್‌ಹಾಗೂ ಗುಜರಾತ್‌ಮೂಲದ ತರಬೇತುದಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ರಂಗದ 'ಗಾರ್ಗ್ ಏವಿಯೇಷನ್' ಸಂಸ್ಥೆಗೆ ಸೇರಿದ 'ಟೆಕ್ನಮ್' ತರಬೇತಿ ವಿಮಾನವು ಬೆಳಿಗ್ಗೆ 11.30ರ ಸುಮಾರಿಗೆ ಹಾರಾಟ ಆರಂಭಿಸಿತ್ತು. ಟೇಕ್ ಆಫ್ ಆದ ಸುಮಾರು 20 ನಿಮಿಷಗಳಲ್ಲೇ ಕತ್ರಿ ಪ್ರದೇಶದ ನಾಥಪೂರ್ವ ಗ್ರಾಮದ ಸಮೀಪ ಗಂಗಾ ನದಿಯ ದಂಡೆಯಲ್ಲಿ ಪತನಗೊಂಡಿದೆ ಎಂದು ಕಾನ್ಪುರ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.
ಮೃತರ ಗುರುತು ಪತ್ತೆ: ಅಪಘಾತದಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಗುಜರಾತ್‌ಮೂಲದ ಸಚಿನ್ ಭಾಟಿಯಾ ಹಾಗೂ ತರಬೇತಿ ಪಡೆಯುತ್ತಿದ್ದ ಕರ್ನಾಟಕ ಮೂಲದ ಅಭಿಷೇಕ್ ಪೂಜಾರಿ ಮೃತಪಟ್ಟ ದುರ್ದೈವಿಗಳು. ಗಾರ್ಗ್ ಏವಿಯೇಷನ್ ಟ್ರೈನಿಂಗ್ ಸೆಂಟರ್‌ನಿಂದ ಹಾರಾಟ ನಡೆಸಿದ್ದ ಇಬ್ಬರೂ ಪೈಲಟ್‌ಗಳು ಒಟ್ಟಾರೆಯಾಗಿ 3,000 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಿದ ಸುದೀರ್ಘ ಅನುಭವ ಹೊಂದಿದ್ದರು.
ತನಿಖೆಗೆ ಎಎಐಬಿ ಆದೇಶ: ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಆಯುಕ್ತ ರಘುವೀರ್ ಲಾಲ್, ಜಂಟಿ ಪೊಲೀಸ್ ಆಯುಕ್ತ (ಜೆಸಿಪಿ) ಸಂಕಲ್ಪ್ ಶರ್ಮಾ ಮತ್ತು ಡಿಸಿಪಿ ಅತುಲ್ ಶ್ರೀವಾಸ್ತವ ಸೇರಿದಂತೆ ಉನ್ನತಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಲ್ಕು ಆಸನಗಳ ಸಾಮರ್ಥ್ಯದ ಈ ವಿಮಾನವು ಪತನಗೊಂಡ ರಭಸಕ್ಕೆ ಸ್ಥಳದಲ್ಲಿ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗಾಳಿಯಲ್ಲಿ ಹಾರಾಡುವಾಗ ಯಾವುದಾದರೂ ವಸ್ತುವಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯದ 'ವಿಮಾನ ಅಪಘಾತ ತನಿಖಾ ಬ್ಯೂರೋ' ತಾಂತ್ರಿಕ ತನಿಖೆಗೆ ಆದೇಶಿಸಿದ್ದು, ತನಿಖೆಯ ನಂತರವಷ್ಟೇ ದುರಂತಕ್ಕೆ ನಿಖರ ಕಾರಣ ತಿಳಿದುಬರಬೇಕಿದೆ.




