ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ಆಪತ್ಕಾಲೀನ ಸ್ಪಂದನಾ ವ್ಯವಸ್ಥೆಯ (ERSS-112) ಸಿಬ್ಬಂದಿ ತೋರಿದ ತ್ವರಿತ ಕಾರ್ಯಾಚರಣೆಯಿಂದಾಗಿ ಇಬ್ಬರು ಮಹಿಳೆಯರ ಜೀವ ಉಳಿದಿದೆ. ಜೋಗ ಜಲಪಾತದ ಬಳಿ ಹಾಗೂ ಕೊಡ್ಲಿ ಸಂಗಮ ಕ್ಷೇತ್ರದಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯರನ್ನು ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಘಟನೆ ೧: ಜೋಗ ಜಲಪಾತದ ಚಾನಲ್‌ನಲ್ಲಿ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ರಕ್ಷಣೆ
ಆಗಸ್ಟ್ 26ರಂದು ತುಮಕೂರು ಮೂಲದ ಯುವತಿಯೊಬ್ಬಳು ಸ್ನೇಹಿತರೊಂದಿಗೆ ಜೋಗ ಜಲಪಾತ ಪ್ರವಾಸಕ್ಕೆ ಬಂದಿದ್ದಳು. ಜೋಗದ ಬಿದನೂರು ಚಾನಲ್ ಬಳಿ ಆಕೆ ಅನುಮಾನಾಸ್ಪದವಾಗಿ ಬಹಳ ಹೊತ್ತು ಓಡಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು, ಕೂಡಲೇ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಇಆರ್‌ವಿ ಸಿಬ್ಬಂದಿಗಳಾದ ಅಣ್ಣಪ್ಪ, ಚಾಲಕ ರಾಘವೇಂದ್ರ ಹಾಗೂ ಕಾರ್ಗಲ್ ಠಾಣೆಯ ಸಂದೀಪ್ ಮತ್ತು ಪುರುಷೋತ್ತಮ್ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರನ್ನು ಕಂಡು ಯುವತಿ ಚಾನಲ್‌ಗೆ ಹಾರಲು ಓಡಿದಾಗ, ಸಿಬ್ಬಂದಿಗಳು ತಕ್ಷಣ ಆಕೆಯನ್ನು ತಡೆದು ರಕ್ಷಿಸಿದ್ದಾರೆ. ಬಳಿಕ ಠಾಣೆಗೆ ಕರೆತಂದು ವಿಚಾರಿಸಿದಾಗ, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ನಿರ್ಧರಿಸಿದ್ದಾಗಿ ತಿಳಿಸಿದ್ದಾಳೆ. ಪೊಲೀಸರು ಆಕೆಯ ಪೋಷಕರನ್ನು ಸಂಪರ್ಕಿಸಿ ಕೌನ್ಸೆಲಿಂಗ್ ನಡೆಸಿ, ಯುವತಿಯನ್ನು ಸುರಕ್ಷಿತವಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಘಟನೆ ೨: ಪತಿಯ ಕರೆಯ ಬೆನ್ನಲ್ಲೇ ನದಿ ಸಂಗಮದಲ್ಲಿ ಪತ್ನಿಯ ರಕ್ಷಣೆ ಮತ್ತೊಂದು ಘಟನೆಯಲ್ಲಿ, ಶಿವಮೊಗ್ಗ ತಾಲೂಕಿನ ಕೊಡ್ಲಿ ನದಿ ಸಂಗಮದ ಬಳಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ರಕ್ಷಿಸಿದ್ದಾರೆ. ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬರು ತುರ್ತು ಕರೆ ಮಾಡಿ, "ನನ್ನ ಪತ್ನಿ ಶಿವಮೊಗ್ಗದ ಕೊಡ್ಲಿ ತುಂಗಾ-ಭದ್ರಾ ನದಿ ಸಂಗಮದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ತೆರಳಿದ್ದಾಳೆ, ದಯವಿಟ್ಟು ರಕ್ಷಿಸಿ" ಎಂದು ಗೋಗರೆದಿದ್ದರು.
ಸ್ಥಳಕ್ಕೆ ತಕ್ಷಣ ಧಾವಿಸಿದ ಇಆರ್‌ವಿ ಸಿಬ್ಬಂದಿ ಅಶೋಕ್ ಕುಮಾರ್ ಹಾಗೂ ಚಾಲಕ ಅಮರೇಶ್ ನಾಯ್ಕ್, ನದಿ ತೀರದಲ್ಲಿ ನಿಂತಿದ್ದ ಮಹಿಳೆಯನ್ನು ಗುರುತಿಸಿ, ಆಕೆಗೆ ಸಮಾಧಾನ ಹೇಳಿ ಪ್ರಾಣ ರಕ್ಷಿಸಿದ್ದಾರೆ.
ಪೋಲಿಸ್ ಸಿಬ್ಬಂದಿಗಳ ಈ ಸಮಯಪ್ರಜ್ಞೆ ಮತ್ತು ಕಾರ್ಯಾಚರಣೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.




