ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಾಗರಿಕರಿಂದ ಕುಂದುಕೊರತೆಗಳ ಮನವಿ ಸ್ವೀಕರಿಸಿ, ಸ್ಥಳದಲ್ಲೇ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 12ರ ಶನಿವಾರದಂದು 'ಪ್ರಜಾಸೇವೆ ಆಂದೋಲನ ಸಭೆ'ಗಳನ್ನು ಆಯೋಜಿಸಲಾಗಿದೆ.
ಚಳ್ಳಕೆರೆ ತಾಲ್ಲೂಕಿನ ಪರುಶುರಾಂಪರ ಹೋಬಳಿಯ ಸಂಬಂಧಿಸಿದಂತೆ, ಪರುಶುರಾಂಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರಜಾಸೇವಾ ಆಂದೋಲನ ಸಭೆ ನಡೆಯಲಿದ್ದು, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರ ಅಧ್ಯಕ್ಷತೆ ವಹಿಸುವರು.
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ನಾಡಕಚೇರಿ ಆವರಣದಲ್ಲಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಕಾಶಿ ಮಹಾಲಿಂಗಸ್ವಾಮಿ ಪ್ರೌಢಶಾಲಾ ಆವರಣದಲ್ಲಿ ಶಾಸಕ ಡಾ. ಎಂ. ಚಂದ್ರಪ್ಪ, ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ, ಮೊಳಕಾಲ್ಮೂರು ತಾಲ್ಲೂಕು ರಾಂಪುರ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ ಶಾಸಕ ಎನ್. ವೈ. ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆಗಳು ನಡೆಯಲಿವೆ. ತಾಲ್ಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಹಿರಿಯೂರು ಧರ್ಮಪುರ ಶ್ರೀ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಭೆ ಆಯೋಜಿಸಲಾಗಿದೆ.
ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು IPGRS ಪೋರ್ಟಲ್‌ನಲ್ಲಿ ದಾಖಲಿಸಿ, ಆನ್‌ಲೈನ್ ಸ್ವೀಕೃತಿ ಪತ್ರ ನೀಡಲಾಗುತ್ತದೆ. ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಸಾರ್ವಜನಿಕರ ಹೊಸ ದೂರುಗಳು ಮತ್ತು ಈ ಹಿಂದೆ ವಿಲೇವಾರಿಯಾಗದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸ್ಥಳದಲ್ಲೇ ಸವಲತ್ತು ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಪ್ರಮುಖ ಇಲಾಖೆಗಳಿಂದ ವಸ್ತುಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ.
ಕುಡಿಯುವ ನೀರು, ಆಸನ ಹಾಗೂ ನೆರಳಿನ ವ್ಯವಸ್ಥೆ ಮಾಡಲಾಗಿದ್ದು, ನಾಗರಿಕರು ಈ ಆಂದೋಲನದ ಸೌಲಭ್ಯ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್. ರಮ್ಯ ಮನವಿ ಮಾಡಿದ್ದಾರೆ.




