ಚಂದ್ರವಳ್ಳಿ ನ್ಯೂಸ್ ನವದೆಹಲಿ:
NEET ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಸುದೀರ್ಘ ಆಂದೋಲನದ ವೇಳೆ ನಡೆದ ಪೊಲೀಸ್ ಕ್ರಮ ಹಾಗೂ ದೌರ್ಜನ್ಯವನ್ನು ಖಂಡಿಸಿ ವಿರೋಧ ಪಕ್ಷಗಳು ನಡೆಸಿದ ತೀವ್ರ ಪ್ರತಿಭಟನೆಯ ನಡುವೆಯೇ, ಕೇಂದ್ರ ಸರ್ಕಾರವು ಸೋಮವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ - 2026’ ಅನ್ನು ಮಂಡಿಸಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಈ ಮಸೂದೆಯನ್ನು ಸದನದಲ್ಲಿ ಮಂಡಿಸಿದರು. ವಿಪಕ್ಷಗಳ ನಾಯಕರು ಜುಲೈ 20 ರಂದು ಸಂಸತ್ತಿಗೆ ನಡೆದ ಪ್ರತಿಭಟನಾ ಮೆರವಣಿಗೆಯ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ವಿರುದ್ಧ ಸರ್ಕಾರದ ಪ್ರತಿಕ್ರಿಯೆಗೆ ಪಟ್ಟು ಹಿಡಿದು ನಿರಂತರವಾಗಿ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.
೨ ವರ್ಷ ಹಳೆಯ ಕಾಯ್ದೆಗೆ ತಿದ್ದುಪಡಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಾಲು ಸಾಲು ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ವ್ಯಾಪಕ ಪ್ರತಿಭಟನೆಯ ನಂತರ, 2 ವರ್ಷಗಳಷ್ಟು ಹಳೆಯದಾದ ಪ್ರಶ್ನೆ ಪತ್ರಿಕೆ ಸೋರಿಕೆ ನಿಗ್ರಹ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲು ಈ ತಿದ್ದುಪಡಿ ಮಸೂದೆಯನ್ನು ತರಲಾಗಿದೆ.
ತನಿಖೆಗೆ ಗಡುವು: ಹೊಸ ಮಸೂದೆಯ ಪ್ರಕಾರ, ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳ ಒಳಗಾಗಿ ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ತ್ವರಿತ ನ್ಯಾಯಾಲಯಗಳ ಸ್ಥಾಪನೆ: ಪ್ರಕರಣದ ಆರೋಪಿಗಳ ವಿಚಾರಣೆಯನ್ನು ವಿಳಂಬವಿಲ್ಲದೆ ನಡೆಸಲು ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
ಕಠಿಣ ಶಿಕ್ಷೆ ಮತ್ತು ದಂಡ: ಪರೀಕ್ಷಾ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳಲು ಅಕ್ರಮ ಎಸಗುವವರ ವಿರುದ್ಧ ಶಿಕ್ಷೆಯ ಪ್ರಮಾಣ ಹಾಗೂ ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಜಾಲಗಳಿಗೆ ಕಡಿವಾಣ ಹಾಕಿ, ದೇಶದ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ.



