ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜಘಟ್ಟ ಗ್ರಾಮದಲ್ಲಿ ಮುಂಗಾರು ದ್ವಿದಳ ಧಾನ್ಯ (ತೊಗರಿ) ಸಂಶೋಧನಾ ಪ್ರಯೋಜನೆ, ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು ಇವರು ಕೃಷಿ ವಿಜ್ಞಾನ ಕೇಂದ್ರ ಹಾಡೋನಹಳ್ಳಿ ಮತ್ತು ನಬಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆ -ಭಾರತೀಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರ ಸಹಯೋಗದೊಂದಿಗೆ
ರಾಜಘಟ್ಟ ಗ್ರಾಮದಲ್ಲಿ ಅನುಸೂಚಿತ ಜಾತಿ ಉಪಯೋಜನೆ ಅಡಿಯಲ್ಲಿ 30 ಜನ ರೈತರಿಗೆ ಕೃಷಿ ಪ್ರಗತಿ ಕಾರ್ಯಕ್ರಮದ ಅಂಗವಾಗಿ ತೊಗರಿಯ ಸಮಗ್ರ ಬೆಳೆ ನಿರ್ವಹಣೆ ಕುರಿತಾಗಿ ಜು. 23 ರಂದು ಒಂದು ದಿನದ ತರಬೇತಿ ಹಮ್ಮಿಕೊಳ್ಳಗಿತ್ತು. ವಿಶೇಷವಾಗಿ ಬೀಜೋಪಚಾರ ವಿಧಾನ ಮತ್ತು ಸಣ್ಣ ಹಿಡುವಳಿಗೆ ಸುಧಾರಿತ ಕುಂಟೆಯ (ವೀಡರ್) ಬಗ್ಗೆ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಲಾಯಿತು.
ಜೊತೆಗೆ ಪೂರಕ ಪರಿಕರಗಳಾದ ಸುಧಾರಿತ ತಳಿಯ ಬಿತ್ತನೆ ಬೀಜ, ದ್ವಿದಳ ಧಾನ್ಯಗಳಿಗೆ ಸೂಕ್ತ ಜೈವಿಕ ಗೊಬ್ಬರ, ಕಳೆ/ಕೀಟನಾಶಕ ಮತ್ತು ಸುಧಾರಿತ ಕುಂಟೆಗಳನ್ನು ಆಯ್ದ ರೈತರಿಗೆ ವಿತರಿಸಲಾಯಿತು.
ಈ ಕುರಿತು ತೊಗರಿ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್. ಸಿ. ಲೋಹಿತಾಶ್ವ ರವರು ಮಾತಾಡಿ ಈ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಂಡು ನಮ್ಮ ದೇಶವನ್ನು ಬೇಳೆಕಾಳು ಬೆಳೆಗಳಲ್ಲಿ ಆತ್ಮ ನಿರ್ಭರಮಾಡುವುದರ ಜೊತೆಗೆ ಲಾಭದಾಯಕ ಕೃಷಿಯಿಂದ ತಮ್ಮ ಜೀವನಮಟ್ಟ ಸುಧಾರಿಸಿ ಕೊಂಡು ಇತರೆ ರೈತರಿಗೆ ಮಾದರಿಯಾಗಬೇಕೆಂದು ಕರೆ ನೀಡಿದರು.
ರೈತರ ಸೇವೆ ಮತ್ತು ಕೃಷಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನ ಯಾವಾಗಲೂ ಸಿದ್ದ, ರೈತರು ಮುಂದೆ ಬಂದು ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಹನುಮಂತರಾಯ ರವರು ಆಗ್ರಹಿಸಿದರು.
ನಬಾರ್ಡ್-ಐ.ಆರ್.ಐ.ಡಿ.ಎಸ್ ಯೋಜನಾಧಿಕಾರಿ ಶ್ರೀ ಮಂಜುನಾಥ ಪಟೇಲ್ ರವರು ತಮ್ಮ ತಂಡ ಗ್ರಾಮದಲ್ಲಿ ರೈತ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದು ಈ ಕಾರ್ಯಕ್ರಮದಿಂದ ಉತ್ತಮ ಫಲಿತಾಂಶ ಸಿಗಲಿದೆಯೆಂದು ತಿಳಿಸಿದರು.
ಈ ತರಬೇತಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳಾದ ಡಾ. ಅತೀಕ್ ಉರ್ ರೆಹಮಾನ್, ಡಾ. ಕೇಶವರೆಡ್ಡಿ, ಡಾ. ಮಂಜುನಾಥ, ಡಾ. ದೇವರಾಜು ಮತ್ತು ಡಾ. ನಿಂಗರಾಜು ರವರು ತಾಂತ್ರಿಕ ಮಾಹಿತಿ ನೀಡಿದರು ಹಾಗೂ ನಬಾರ್ಡ್-ಐ.ಆರ್.ಐ.ಡಿ.ಎಸ್ ನ ವೆಂಕಟಾಚಲಪತಿ, ಶಾಂತರಾಜು, ನಾಗರಾಜು, ಜಲಜಾಕ್ಷಿ ಮತ್ತು ಅಂಜಿನಪ್ಪ ಹಾಗು ಸುತ್ತಮುತ್ತಲಿನ ಗ್ರಾಮದ ರೈತ ಮತ್ತು ರೈತ ಮಹಿಳೆ ಹಾಜರಿದ್ದರು.



