Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

4.32 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ಗೆ ವರ್ಗಾವಣೆ: ಸಚಿವ ಕೆ.ಎಚ್. ಮುನಿಯಪ್ಪ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಹಲವು ಮಂದಿ ಅನರ್ಹರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಅವರನ್ನು ಆದಷ್ಟು ಬೇಗ ಎಪಿಎಲ್ ವ್ಯಾಪ್ತಿಗೆ ಸೇರಿಸಿ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗುವುದು ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಪ್ರಮುಖ ನಿರ್ಧಾರಗಳ ಕುರಿತು ಅವರು ಸಮಗ್ರ ಮಾಹಿತಿ ನೀಡಿದರು.

ಶೇ.50ರಷ್ಟು ಪರಿಷ್ಕರಣೆ ಪೂರ್ಣ:
ಕೇಂದ್ರ ಸರ್ಕಾರವು ರಾಜ್ಯದಲ್ಲಿ ಒಟ್ಟು 7.76 ಲಕ್ಷ ಅನುಮಾನಾಸ್ಪದ ಹಾಗೂ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಗುರುತಿಸಿದೆ. ಈ ಪೈಕಿ ಇಲಾಖೆಯು ಈಗಾಗಲೇ ಶೇಕಡಾ 50ರಷ್ಟು ಪರಿಷ್ಕರಣೆ ಕಾರ್ಯವನ್ನು ಪೂರ್ಣಗೊಳಿಸಿದೆ.

ಎಪಿಎಲ್‌ಗೆ ಸೇರಿದ ಕಾರ್ಡ್‌ಗಳು: ಇದುವರೆಗೆ ಒಟ್ಟು 4,32,295 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ.

ಆದಾಯ ಮಿತಿ ಹೆಚ್ಚಳ: ಬಿಪಿಎಲ್ ಕಾರ್ಡ್‌ಗಾಗಿನ ಆದಾಯದ ಮಿತಿಯನ್ನು ಹೆಚ್ಚಿಸುವಂತೆ ಸಾರ್ವಜನಿಕರಿಂದ ವ್ಯಾಪಕ ಬೇಡಿಕೆ ಇದೆ. ಆರ್.ವಿ‌. ದೇಶಪಾಂಡೆ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗ ಕೂಡ ಈ ಬಗ್ಗೆ ಶಿಫಾರಸು ಮಾಡಿದ್ದು, ಆದಷ್ಟು ಬೇಗ ಆದಾಯ ಮಿತಿ ಹೆಚ್ಚಳಕ್ಕೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ತುರ್ತು ಕಾರ್ಡ್ ಸೌಲಭ್ಯ: ಆರೋಗ್ಯ ಸಂಬಂಧಿತ ತುರ್ತು ಕಾರಣಗಳಿದ್ದರೆ ಕೇವಲ 15 ದಿನಗಳ ಒಳಗಾಗಿ ಬಿಪಿಎಲ್ ಕಾರ್ಡ್ ನೀಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅನ್ನಭಾಗ್ಯದ ಫಲಾನುಭವಿಗಳು ಎಷ್ಟು?:
ರಾಜ್ಯದಲ್ಲಿ ಒಟ್ಟಾರೆ ಶೇ. 65.69ರಷ್ಟು ಜನಸಂಖ್ಯೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿದೆ.

ಕೇಂದ್ರ ಸರ್ಕಾರದ ವ್ಯಾಪ್ತಿ: 1,08,95,138 ಪಡಿತರ ಚೀಟಿಗಳ ಮೂಲಕ 4,02,03,247 ಫಲಾನುಭವಿಗಳು.
ರಾಜ್ಯ ಸರ್ಕಾರದ ವ್ಯಾಪ್ತಿ: 16,13,266 ಪಡಿತರ ಚೀಟಿಗಳ ಮೂಲಕ 43,48,046 ಫಲಾನುಭವಿಗಳು.
ಒಟ್ಟು ಫಲಾನುಭವಿಗಳು: 1,25,08,404 ಪಡಿತರ ಚೀಟಿಗಳ ಮೂಲಕ ಒಟ್ಟು 4,45,51,293 ಜನ ಅನ್ನಭಾಗ್ಯದ ಸೌಲಭ್ಯ ಪಡೆಯುತ್ತಿದ್ದಾರೆ.

ಅಕ್ಕಿ ವಿತರಣೆ ಮತ್ತು ನಗದು ವರ್ಗಾವಣೆ ವಿವರ:
ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಜುಲೈ 2023ರಿಂದ ಡಿಸೆಂಬರ್ 2024ರವರೆಗೆ 72.02 ಕೋಟಿ ಫಲಾನುಭವಿಗಳಿಗೆ (ಒಟ್ಟು ಅವಧಿಯ ಆಧಾರದ ಮೇಲೆ) 11,561 ಕೋಟಿ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗಿದೆ. ಆದರೆ, ಫೆಬ್ರುವರಿ 2025 ರಿಂದ ಜಾರಿಗೆ ಬರುವಂತೆ 4,44,67,942 ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನೇ ನೇರವಾಗಿ ವಿತರಿಸಲಾಗುತ್ತಿದೆ. ಇದಕ್ಕಾಗಿ ಎಫ್‌ಸಿಐನ ಯೋಜನೆಯಡಿ ಪ್ರತಿ ತಿಂಗಳು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಸಲಾಗುತ್ತಿದೆ.

ಪಾರದರ್ಶಕತೆಗೆ 'ಸ್ಮಾರ್ಟ್ ಪಿಡಿಎಸ್' ಸುಧಾರಣೆ:
ಪಡಿತರ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ನಿಖರವಾಗಿಸಲು 'ಸ್ಮಾರ್ಟ್ ಪಿಡಿಎಸ್' ಯೋಜನೆ ಜಾರಿಗೆ ತರಲಾಗುತ್ತಿದೆ. ಇದರ ಭಾಗವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಪಾಸ್ ಯಂತ್ರಗಳು ಹಾಗೂ ಎಲೆಕ್ಟ್ರಾನಿಕ್ ತೂಕದ ಯಂತ್ರಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಬೆಂಬಲ ಬೆಲೆ ಖರೀದಿ ಹಾಗೂ ಹೊಸ ದರ ನಿಗದಿ:
2025-26
ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ 5.69 ಲಕ್ಷ ಮೆಟ್ರಿಕ್ ಟನ್ ರಾಗಿ, 2.21 ಲಕ್ಷ ಮೆಟ್ರಿಕ್ ಟನ್ ಜೋಳ ಹಾಗೂ 5,670 ಟನ್ ಭತ್ತವನ್ನು ಖರೀದಿಸಲಾಗಿದೆ. ಇದರಿಂದ 4,422.17 ಕೋಟಿ ವೆಚ್ಚದಲ್ಲಿ 2,89,350 ರೈತರಿಗೆ ನ್ಯಾಯಯುತ ಬೆಲೆ ಸಿಕ್ಕಂತಾಗಿದೆ.

2026-27ನೇ ಸಾಲಿನ ಪ್ರತಿ ಕ್ವಿಂಟಾಲ್ MSP ದರ:
ರಾಗಿ: 5,205, ಜೋಳ: 4,023, ಭತ್ತ: 2,461.
(ಕೇಂದ್ರದಿಂದ ಬರಬೇಕಿದ್ದ 1,902.58 ಕೋಟಿ ಎಂಎಸ್‌ಪಿ ಮರುಪಾವತಿ ಪೈಕಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 190.10 ಕೋಟಿ ಬಿಡುಗಡೆಯಾಗಿದೆ).

ಕಾಳಸಂತೆಕೋರರಿಗೆ ಬಿಗಿಬೆಕ್ಕಸ: 49.38 ಕೋಟಿ ಮಾಲು ಜಪ್ತಿ
ಪಡಿತರ ಧಾನ್ಯಗಳ ಅಕ್ರಮ ಸಾಗಾಣಿಕೆ ಹಾಗೂ ಕಾಳಸಂತೆ ತಡೆಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,497 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 49.38 ಕೋಟಿ ಮೌಲ್ಯದ 2,86,181 ಕ್ವಿಂಟಾಲ್ ಆಹಾರಧಾನ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಇಲಾಖೆಯು 2023-24ರಲ್ಲಿ 83.19 ಕೋಟಿ ಹಾಗೂ 2025-26ರಲ್ಲಿ ₹90.09 ಕೋಟಿ ರಾಜಸ್ವ ಸಂಗ್ರಹಿಸಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲೇ ಈಗಾಗಲೇ 17.67 ಕೋಟಿ ರಾಜಸ್ವ ಸಂಗ್ರಹಣೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.