ಚಂದ್ರವಳ್ಳಿ ನ್ಯೂಸ್, ಗುಬ್ಬಿ:
ತಾಲ್ಲೂಕಿನ ಸಾರ್ವಜನಿಕರ ದೀರ್ಘಕಾಲದ ಬೇಡಿಕೆಯಾಗಿದ್ದ ಸಂಚಾರ ದಟ್ಟಣೆ ಮತ್ತು ಸುರಕ್ಷತೆಗೆ ಸೂಕ್ತ ಪರಿಹಾರ ಸಿಕ್ಕಂತಾಗಿದೆ. ಗುಬ್ಬಿಯ ಕಳ್ಳಿಪಾಳ್ಯ ಗೇಟ್‌ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ (ಎಲ್‌ಸಿ) ಸಂಖ್ಯೆ 48ರ ಬದಲಿಗೆ ನೂತನವಾಗಿ ನಿರ್ಮಿಸಲಿರುವ ರಸ್ತೆ ಕೆಳಸೇತುವೆ ಯೋಜನೆಗೆ ಕೇಂದ್ರ ಸರ್ಕಾರದ ಪದಾಧಿಕಾರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.
ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರು ಈ ಮಹತ್ವದ ಯೋಜನೆಗೆ ಅಧಿಕೃತವಾಗಿ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, "ಈ ಕೆಳಸೇತುವೆ ಯೋಜನೆಯು ಈ ಭಾಗದ ಸಾರ್ವಜನಿಕರಿಗೆ ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸುವುದಲ್ಲದೆ, ಪ್ರಾದೇಶಿಕ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ" ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಮಾತನಾಡಿ, ಯೋಜನೆಯು ಶೀಘ್ರವಾಗಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಪ್ರವೀಣ್ ಕುಮಾರ್‌ಸೇರಿದಂತೆ ಹಲವು ಪ್ರಮುಖ ನಾಯಕರು, ರೈಲ್ವೆ ಇಲಾಖೆಯ ಸಿಬ್ಬಂದಿ ಹಾಗೂ ಕಳ್ಳಿಪಾಳ್ಯ ಭಾಗದ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು, ರೈಲ್ವೆ ಗೇಟ್ ಸಮಸ್ಯೆ ಮುಕ್ತಾಯವಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.



