ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
‘ಹೊಸದುರ್ಗ - ಹಿರಿಯೂರು ಮಾರ್ಗದಲ್ಲಿ ನಿಯಮ ಉಲ್ಲಂಘಿಸಿ ಸರ್ಕಾರಿ ಬಸ್‌ಗಳನ್ನು ಓಡಿಸಲಾಗುತ್ತಿದೆ’ ಎಂಬ ಆಪಾದನೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ತಳ್ಳಿಹಾಕಿದ್ದು, ಎಲ್ಲಾ ಬಸ್‌ಗಳು ಸರ್ಕಾರಿ ನಿಯಮಾನುಸಾರ ಸಂಚರಿಸುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಷಫೀವುಲ್ಲಾ ಅವರು, “ಹೊಸದುರ್ಗದಿಂದ ಹಿರಿಯೂರು ನಡುವೆ 15 ಖಾಸಗಿ ಬಸ್‌ಗಳು ದಿನಂಪ್ರತಿ 35 ರಿಂದ 40 ಟ್ರಿಪ್‌ಸಂಚರಿಸುತ್ತಿವೆ. ಆದಾಗ್ಯೂ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನಿಯಮ ಗಾಳಿಗೆ ತೂರಿ 14 ಸಿಂಗಲ್ ಟ್ರಿಪ್ ಬಸ್‌ಗಳನ್ನು ಓಡಿಸುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ನಡುವೆ ಪೈಪೋಟಿ ಏರ್ಪಡುವಂತೆ ಮಾಡಿದ್ದಾರೆ" ಎಂದು ಆರೋಪಿಸಿ ಮಾಧ್ಯಮಗಳಲ್ಲಿ ನೀಡಿದ್ದ ವರದಿಗೆ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ರಾಜ್ಯ ಸರ್ಕಾರವು ಹೊರಡಿಸಿರುವ ಹಾಗೂ ‘ಕರ್ನಾಟಕ ಸಮಗ್ರ ಪ್ರದೇಶ ಯೋಜನೆ’ಯಡಿ ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ನಿಯಮಾನುಸಾರವೇ ಪರವಾನಗಿ ಪಡೆಯಲಾಗಿದೆ. ಹೊಸದುರ್ಗ - ಹಿರಿಯೂರು ಮಾರ್ಗದಲ್ಲಿ ಒಟ್ಟು 06 ಕೆಎಸ್‌ಆರ್‌ಟಿಸಿ ವಾಹನಗಳಿಗೆ 36 ಸಿಂಗಲ್ ಟ್ರಿಪ್‌ಗಳನ್ನು ಸಂಚರಿಸಲು ಕಾನೂನುಬದ್ಧ ಅನುಮತಿ ಹಾಗೂ ಮಂಜೂರಾತಿ ದೊರೆತಿದೆ.
ಸಾರ್ವಜನಿಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಅನುಕೂಲಕ್ಕಾಗಿ ಹಾಗೂ ಸಾರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಷ್ಟೇ ಈ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆಯೇ ವಿನಃ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.




