ಚಂದ್ರವಳ್ಳಿ ನ್ಯೂಸ್ ಬೆಂಗಳೂರು:
ಈ ವಾರದೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಗೆ ಪ್ರಯಾಣ ಬೆಳೆಸುವ ಮೊದಲು ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ಕುರಿತ ಮಾಧ್ಯಮಗಳ ಪ್ರಶ್ನೆಗೆ "ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ನೀವೇ (ಮಾಧ್ಯಮಗಳು) ಹೆಚ್ಚು ಆತುರದಲ್ಲಿದ್ದೀರಿ" ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದರು.
ದೆಹಲಿಯಲ್ಲಿ ಸಂಸದರ ಸಭೆ: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದೆಹಲಿಯಲ್ಲಿ ರಾಜ್ಯದ ಸಂಸದರ ಸಭೆ ನಡೆಸುತ್ತಿರುವುದಾಗಿ ತಿಳಿಸಿದ ಸಿಎಂ, ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಶ್ರಮಿಸುವ ಕುರಿತು ಮನವಿ ಮಾಡುವುದಾಗಿ ಹೇಳಿದರು.
ನೀರಾವರಿ ಮತ್ತು ಬರ ಪರಿಸ್ಥಿತಿ ಚರ್ಚೆ: ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಹಾಗೂ ಕಾವೇರಿ, ಮಹದಾಯಿ, ಮೇಕೆದಾಟು ಮತ್ತು ಕೃಷ್ಣಾ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಕುರಿತು ಸಂಸದರಿಗೆ ಸಮಗ್ರ ಮಾಹಿತಿ ನೀಡಿ, ಕೇಂದ್ರದ ಮಟ್ಟದಲ್ಲಿ ಧ್ವನಿ ಎತ್ತುವಂತೆ ಕೋರಲಾಗುವುದು ಎಂದರು.
ಬೆಂಗಳೂರಿನಲ್ಲಿ ಸರ್ವಪಕ್ಷ ಸಭೆ: ದೆಹಲಿ ಪ್ರವಾಸದ ನಂತರ ಬೆಂಗಳೂರಿನಲ್ಲಿ ಸರ್ವಪಕ್ಷ ಸಭೆ ಕರೆಯಲಾಗುವುದು. ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರನ್ನು ಭೇಟಿ ಮಾಡಿ ರಾಜ್ಯದ ಮುಖ್ಯ ವಿಚಾರಗಳ ಬಗ್ಗೆ ಚರ್ಚಿಸುವುದಾಗಿ ಸ್ಪಷ್ಟಪಡಿಸಿದರು.



