ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ರಾಜಕೀಯ ಚಟುವಟಿಕೆಗಳು ದಿಢೀರ್ ಚುರುಕುಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹಿರಿಯ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಉನ್ನತ ಮಟ್ಟದ ಸಮಾಲೋಚನೆ ನಡೆಸಿದ್ದಾರೆ.
ದೆಹಲಿ ಪ್ರವಾಸ ಕೈಗೊಳ್ಳುವ ಮುನ್ನ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ 'ಕಾವೇರಿ'ಗೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
'ಕಾವೇರಿ' ನಿವಾಸದಲ್ಲಿ ನಡೆದ ಈ ಭೇಟಿಯಲ್ಲಿ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಯ ಕುರಿತು ಪ್ರಾಥಮಿಕ ಚರ್ಚೆಗಳು ನಡೆದಿವೆ. ಉಭಯ ನಾಯಕರು ಸುಮಾರು 40 ನಿಮಿಷಗಳಿಗೂ ಹೆಚ್ಚು ಕಾಲ 'ಒನ್ ಟು ಒನ್' (ಏಕಾಂತ) ಸುದೀರ್ಘ ಸಮಾಲೋಚನೆ ನಡೆಸಿದ್ದು, ಹೈಕಮಾಂಡ್ ಮುಂದೆ ಇಡಬೇಕಾದ ವಿಷಯಗಳ ಕುರಿತು ಜಂಟಿ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ದೆಹಲಿಗೆ ಜಂಟಿ ಪ್ರಯಾಣ:
ಬೆಂಗಳೂರಿನಲ್ಲಿ ಮಾತುಕತೆ ಮುಗಿಸಿರುವ ನಾಯಕರು, ಒಂದೇ ವಿಮಾನದ ಮೂಲಕ ಹೊಸ ದೆಹಲಿಗೆ ಜಂಟಿಯಾಗಿ ಪ್ರಯಾಣ ಬೆಳೆಸಲಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಅಧಿಕೃತ ಸಭೆಗಳು ಆರಂಭವಾಗಲಿವೆ.
ಮೊದಲ ಹಂತದ ಹೈಕಮಾಂಡ್ ಸಭೆ:
ಸಚಿವ ಸಂಪುಟ ವಿಸ್ತರಣೆಯ ಅಂತಿಮ ಕಸರತ್ತಿಗೆ ಸಂಬಂಧಿಸಿದಂತೆ ಜುಲೈ 16 ರಂದು ಗುರುವಾರ ದೆಹಲಿಯಲ್ಲಿ ಮೊದಲ ಹಂತದ ಮಹತ್ವದ ಸಭೆ ನಡೆಯುವ ನಿರೀಕ್ಷೆಯಿದೆ.
ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ಈ ಸಭೆ ಆಯೋಜನೆಗೊಂಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವ ವಹಿಸಲಿದ್ದಾರೆ. ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಭಾಗವಹಿಸಿ ಆಕಾಂಕ್ಷಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.



