LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮತದಾರರ ಪಟ್ಟಿ ಪರಿಷ್ಕರಣೆ: ಶೇ.94 ರಷ್ಟು ಗಣಕೀಕರಣ ಪೂರ್ಣ- ಜಿಲ್ಲಾಧಿಕಾರಿ ಟಿ.ವೆಂಕಟೇಶ್

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ . ಇದುವರೆಗೂ ಶೇ.94 ರಷ್ಟು ಗಣಕೀಕರಣ ಕಾರ್ಯ ಪೂರ್ಣಗೊಂಡಿದ್ದು
, ಶೇ.88.17 ರಷ್ಟು ಗಣತಿ ನಮೂನೆಗಳನ್ನು ಮತಪಟ್ಟಿ ಸೇರ್ಪಡೆಗೆ ಗಣಕೀಕರಣಗೊಳಿಸಲಾಗಿದೆ. ಉಳಿದಂತೆ ಮರಣ, ಶಾಶ್ವತ ವಲಸೆ, ಡಬಲ್ ಎಂಟ್ರಿ ಮತ್ತು ಗೈರು ಹಾಜರಿ ಕಂಡುಬಂದಿದೆ. ಆಗಸ್ಟ್ 8 ವರೆಗೆ ಮನೆ ಭೇಟಿ ಕಾರ್ಯ ನಡೆಯಲಿದ್ದು, ಅಂತಿಮ ಹಂತದ ಮನೆ ಭೇಟಿ ಕಾರ್ಯಕ್ಕೆ ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿ.ಎಲ್.ಎ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಜರುಗಿದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಅವರು ಮಾತನಾಡಿದರು.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಶಿಫಾರಸು ಮಾಡುವಾಗ, ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಬಿಎಲ್‍ಎ ಅವರ ದೃಢೀಕರಣ ಸಹಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಜಿಲ್ಲೆಯ ಒಟ್ಟು 14,40,534 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 12,70,105 ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ. 26,705 ಮರಣ, 43,174 ಶಾಶ್ವತ ವಲಸೆ, 1651 ಡಬಲ್ ಎಂಟ್ರಿ ಹಾಗೂ 4,336 ಗೈರು ಹಾಜರಿ ಕಂಡುಬಂದಿದೆ. ಜಿಲ್ಲೆಯಲ್ಲಿ ಸುಮಾರು ಶೇ.6 ರಿಂದ 8 ರಷ್ಟು ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಶಿಫಾರಸ್ಸು ಮಾಡುವ ಸಾಧ್ಯತೆಯಿದೆ.

ಸ್ಥಳಾಂತರಗೊಂಡವರು ಅಥವಾ ತಾತ್ಕಾಲಿಕವಾಗಿ ಇಲ್ಲದಿರುವವರು ವಾಪಸ್ ಬಂದಲ್ಲಿ ಅವರಿಗೆ ಹೆಸರು ಸೇರಿಸಲು ಅವಕಾಶವಿದೆ. ಆಗಸ್ಟ್ 8ರ ನಂತರ ಪ್ರಾರಂಭವಾಗುವ 'ಹಕ್ಕು ಮತ್ತು ಆಕ್ಷೇಪಣೆ' ಸಲ್ಲಿಕೆಯ 1 ತಿಂಗಳ ಅವಧಿಯಲ್ಲಿ 'ಫಾರಂ-6' ಸಲ್ಲಿಸಿ ಪಟ್ಟಿಗೆ ಮರುಸೇರ್ಪಡೆಯಾಗಬಹುದು. ಇದೇ 18 ವರ್ಷ ತುಂಬಿದವರು ಸಹ ಫಾರಂ-6 ಅಲ್ಲಿ ಮತದಾರರ ಪಟ್ಟಿ ಸೇರ್ಪಡೆ ಅರ್ಜಿ ಸಲ್ಲಿಸಬಹುದು. ರಾಜ್ಯದಲ್ಲೇ ಮತದಾರರ ಪಟ್ಟಿಯ ನಿಖರತೆ ಮತ್ತು ಶುದ್ಧತೆ ಕಾಯ್ದುಕೊಳ್ಳುವಲ್ಲಿ ಬೆಳಗಾವಿ ಜಿಲ್ಲೆ ಪ್ರಥಮ ಸ್ಥಾನದಲ್ಲಿ ಇದ್ದರೆ, ಚಿತ್ರದುರ್ಗ ಎರಡನೇ ಸ್ಥಾನದಲ್ಲಿದೆ.

 ಜಿಲ್ಲೆಯ ಪರಿಷ್ಕರಣೆ ಕಾರ್ಯವು ಗ್ರಾಮೀಣ ಭಾಗದಲ್ಲಿ ಉತ್ತಮವಾಗಿದ್ದರೆ, ನಗರ ಪ್ರದೇಶದಲ್ಲಿ ಕಡಿಮೆಯಿದೆ. ಒಂದೇ ವಾರ್ಡ್‍ನಲ್ಲಿ ಸ್ವಂತ ಮನೆ ಹೊಂದಿದ್ದು, ಮತ್ತೊಂದು ವಾರ್ಡ್‍ನಲ್ಲಿ ಬಾಡಿಗೆಗೆ ಇರುವುದು ಹಾಗೂ ಆಗಾಗ ಮನೆ ಬದಲಾಯಿಸುವುದರಿಂದ ಅಧಿಕಾರಿಗಳ ಪರಿಶೀಲನೆಗೆ ಮತದಾರರು ಸಿಗುತ್ತಿಲ್ಲ. ಈ ಸವಾಲನ್ನು ಎದುರಿಸಲು ಪ್ರತಿಯೊಂದು ಮನೆಗೂ ಗುರುತು ಮಾಡಿ ಹುಡುಕುವ ಕಾರ್ಯ ನಡೆಯುತ್ತಿದೆ. ಬಾಕಿ ಇರುವ ಸುಮಾರು 79,000 ಮತದಾರರ ಪರಿಶೀಲನೆಯನ್ನು ಮುಂದಿನ ಒಂದು ವಾರದೊಳಗೆ ಪೂರ್ಣಗೊಳಿಸಲಾಗುವುದು. ಈ ಕಾರ್ಯ ಯಶಸ್ವಿಯಾಗಲು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಕೋರಿದರು.

ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ಬೀಬೀ ಫಾತಿಮಾ, ಗ್ರೇಡ್-2 ತಹಶೀಲ್ದಾರ್ ಮಲ್ಲಿಕಾರ್ಜುನ್, ಕಾಂಗ್ರೆಸ್ ಪಕ್ಷದ ನಾಸೀರ್, ಬಿಜೆಪಿ ಪಕ್ಷದ ಮೋಹನ್ ಕುಮಾರ್, ಜೆ.ಡಿ.ಎಸ್ ಪಕ್ಷದ ಗೋಪಾಲಸ್ವಾಮಿ ನಾಯಕ, ಸಿ.ಪಿ.ಎಂ. ಪಕ್ಷದ ಗೌಸ್‍ಪೀರ್ ಸೇರಿದಂತೆ ಮತ್ತಿರರು ಇದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST