Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಅಸಲಿಯತ್ತು

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಅಸಲಿಯತ್ತು.. ಧಾರಾವಾಹಿ ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು.....

ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ  ಮಾಯಾಲೋಕ.,............

ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ ಹುಚ್ಚು ಸ್ವಲ್ಪ ಹೆಚ್ಚು. ಅದರಲ್ಲೂ ಯುವಕರ ಆದ್ಯತೆ ಚಲನಚಿತ್ರವೇ. ಇದೊಂದು ಕೋಟ್ಯಾಂತರ ರೂಪಾಯಿಗಳ ಮನರಂಜನಾ ವ್ಯವಹಾರ......

ಆದರೆ ಈಗ ಆ ವ್ಯವಹಾರ ನಮ್ಮ ಮನೆಗಳಿಗೇ ಮುಖ್ಯವಾಗಿ ಕೌಟುಂಬಿಕ ಮೌಲ್ಯಗಳಿಗೇ ಕೈ ಹಾಕಿದೆ. ವ್ಯಾವಹಾರಿಕ ಪೈಪೋಟಿಗಿಳಿದ ಅದರಲ್ಲೂ ಮುಖ್ಯವಾಗಿ ಟೆಲಿವಿಷನ್ ಮಾಧ್ಯಮ ಇನ್ನೂ ಬಹಳಷ್ಟು ವಿಷಯಗಳಲ್ಲಿ ಮಾನಸಿಕವಾಗಿ ಭ್ರೂಣಾವಸ್ಥೆಯಲ್ಲೇ ಇರುವ ಅನೇಕ ಮಹಿಳೆಯರ ಅಂತರಾಳಕ್ಕೆ ಲಗ್ಗೆ ಇಟ್ಟು ತಪ್ಪು ಸಂದೇಶಗಳನ್ನು ಹರಿಯಬಿಡುತ್ತಿದೆ......

ಹೆಣ್ಣು  ಸಮಾಜದ ಮುಕ್ತತೆಗೆ ತೆರೆದುಕೊಳ್ಳುತ್ತಿರುವ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ ಕೆಟ್ಟ ಮೌಲ್ಯಗಳನ್ನು - ಅಮಾನವೀಯ ವರ್ತನೆಗಳನ್ನು ಸಮರ್ಥಿಸುವ, ಅತಿರಂಜಿತ ಘಟನೆಗಳನ್ನು ವೈಭವೀಕರಿಸಿ ವಾಸ್ತವದ ಅರ್ಥವನ್ನು ಮರೆಮಾಚುತ್ತಿವೆ......

ಒಬ್ಬ ಕಥೆಗಾರ ಅಥವಾ ಚಿತ್ರ ಕಥೆಗಾರ ತನ್ನ ಕಲ್ಪನೆ - ಅನುಭವದಲ್ಲಿ ಮೂಡಿದ ದೃಶ್ಯಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಹಲವಾರು ಮಾರ್ಗಗಳನ್ನು ಉಪಯೋಗಿಸುತ್ತಾನೆ.

ಆದರೆ ಇದು ವ್ಯಾವಹಾರಿಕ ಪೈಪೋಟಿಯ ಮನರಂಜನಾ ಉದ್ಯಮವಾಗಿ ಮಾರ್ಪಟ್ಟಿರುವುದರಿಂದ ಅತಿಹೆಚ್ಚು ವೀಕ್ಷಕರನ್ನು ತಲುಪುವ - ಅವರನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳವ - ಅದರಿಂದ ಬರುವ ಜಾಹೀರಾತು ಮುಖಾಂತರ ಹಣ ಗಳಿಸುವ ಪ್ರಲೋಭನೆಗೆ ಒಳಗಾಗುತ್ತಾನೆ.

ಅಲ್ಲಿಂದ ಶುರುವಾಗುತ್ತದೆ ನೋಡಿ ಈ ಮಾಯಾಜಾಲದ ವಿಕೃತಿಗಳು......
ಪ್ರತಿ ಪಾತ್ರಗಳನ್ನು ವಿಚಿತ್ರವಾಗಿ ಸೃಷ್ಟಿಸುವ, ಘಟನೆಗಳನ್ನು ಊಹೆಗೂ ನಿಲುಕದಂತೆ ಬೆಸೆಯುವ, ವರ್ತನೆಗಳನ್ನು ಅತಿರೇಕಕ್ಕೆ ಕೊಂಡೊಯ್ಯುವ, ಕುತೂಹಲಕ್ಕಾಗಿ ಸ್ಥಾಪಿತ ಮಾನವೀಯ ಮೌಲ್ಯಗಳನ್ನೇ ಉಲ್ಟಾ ಪಲ್ಟಾ ಮಾಡುವ ಅನೇಕ ಚಾಕಚಕ್ಯತೆಯ ಬಲೆ ಬೀಸಲಾಗುತ್ತದೆ.

ಅನೈತಿಕತೆಯನ್ನು ಚಾಣಾಕ್ಷವಾಗಿ ನಿಭಾಯಿಸುವ, ಕೊಲೆ ಮುಂತಾದ ಅಪರಾಧಗಳನ್ನು ವಾಸ್ತವ ಲೋಕಕ್ಕಿಂತ ಬರಹಗಾರನ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸುವ ರೀತಿಗಳು ನಿಜ ಲೋಕದ  ಅರಿವಿರದ ಜನರನ್ನು ಪ್ರಚೋದಿಸುತ್ತಿರುವುದು ನಮ್ಮ ದಿನನಿತ್ಯದ ನೇರ ಅರಿವಿಗೆ ಬರುತ್ತಿದೆ. ಇದು ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ.....

ಈಗ ಪ್ರಸಾರವಾಗುತ್ತಿರುವ ಬಹುತೇಕ ಧಾರವಾಹಿಗಳಲ್ಲಿ ಮಹಿಳೆಯರನ್ನು ವಿಲನ್ ಗಳಾಗಿ ಚಿತ್ರಿಸಿ ಆಕೆಯ ವ್ಯಕ್ತಿತ್ವವನ್ನೇ ಸಂಪೂರ್ಣ ಕೆಳಮಟ್ಟಕ್ಕೆ ಇಳಿಸುವ ಮೂಲಕ ಒಂದು ಸಾಂಪ್ರದಾಯಿಕ ವಾತಾವರಣವನ್ನೇ ಬಡಮೇಲು ಮಾಡಲಾಗಿದೆ. ಇಂದಿನ ಯುವ ಜನಾಂಗ ಮಹಿಳೆಯರ ಮೇಲೆ ಗೌರವ ಕಳೆದುಕೊಳ್ಳಲು ಇದು ಒಂದು ಕಾರಣವಾಗಿದೆ.... 

ಎಷ್ಟೋ ಮಹಿಳೆಯರು ಈಗಲೂ ಧಾರಾವಾಹಿಯ ಪಾತ್ರಗಳು ವರ್ತಿಸುವ ರೀತಿಯನ್ನು ದಿನನಿತ್ಯ ತಮ್ಮದೇ ಶೈಲಿಯಲ್ಲಿ ಚರ್ಚಿಸುತ್ತಾ, ಅದರ ಪ್ರಭಾವಕ್ಕೆ ಒಳಗಾಗಿ ತಮ್ಮ ನಡತೆಯ ಕೆಲವು ಕೆಟ್ಟ ಅಂಶಗಳನ್ನು ಸಮರ್ಥಿಸಿಕೊಳ್ಳತೊಡಗಿದ್ದಾರೆ. ಕೆಟ್ಟದ್ದಕ್ಕೆ ಮಾನಸಿಕ ಪ್ರೋತ್ಸಾಹ ದೊರೆತರೆ ಆ ಸಮಾಜ ದಾರಿ ತಪ್ಪುವ ಸಾಧ್ಯತೆ ಹೆಚ್ಚು...... ರಿಯಾಲಿಟಿ ಶೋಗಳ ಮುಕ್ತತೆ ಸಹನೀಯವೇ...........

ದೈಹಿಕ ಮುಕ್ತತೆ, ಮಾನಸಿಕ ಮುಕ್ತತೆ, ಕೌಟುಂಬಿಕ ಮುಕ್ತತೆ, ನೈತಿಕ ಮುಕ್ತತೆ, ಸಂಭಾಷಣೆಗಳ ಮುಕ್ತತೆ, ಭಾವನೆಗಳ ಮುಕ್ತತೆ ಬಹುಶಃ ಒಂದಷ್ಟು ಉಡುಗೆ ತೊಡುಗೆ ಹೊರತುಪಡಿಸಿ ಎಲ್ಲವೂ ಮುಕ್ತವಾಗುತ್ತಿರುವ ಅನುಭವ ಈ ಕೆಲವು ರಿಯಾಲಿಟಿ ಶೋಗಳನ್ನು ನೋಡಿದಾಗ ಆಗುತ್ತಿದೆ.

ಇದು ಸರಿಯೇ ಅಥವಾ ತಪ್ಪೇ ? ಇದರ ಪರಿಣಾಮ ಸಮಾಜದ ಮೇಲೆ ಉತ್ತಮವಾಗುತ್ತದೆಯೇ ಅಥವಾ ಕೆಟ್ಟದ್ದಾಗುತ್ತದೆಯೇ ?....

ಸಾಮಾನ್ಯವಾಗಿ ಸಂಪ್ರದಾಯವಾದಿಗಳು ಮುಕ್ತತೆಯ ವಿರೋಧಿಗಳು ಮತ್ತು ಪ್ರಗತಿಪರರು ಮುಕ್ತತೆಯ ಪರವಾಗಿರುವವರು.  ಹಾಗೆಯೇ ಅನೇಕ ಇತರ ವಿಷಯಗಳಲ್ಲಿ ಇಬ್ಬರಲ್ಲಿಯೂ ಸಾಕಷ್ಟು ಗೊಂದಲಗಳಿವೆ..... 

ಆದರೆ ರಿಯಾಲಿಟಿ ಶೋಗಳ ಮುಕ್ತತೆ ಕೃತಕ - ಅಸಹಜ - ಮನರಂಜನೆ ಮತ್ತು ವಾಣಿಜ್ಯೀಕರಣದ ಉದ್ದೇಶ ಹೊಂದಿರುತ್ತದೆ. ಇಲ್ಲಿನ ಮುಕ್ತತೆಯಲ್ಲಿ ವೈಚಾರಿಕ ಚಿಂತನೆಗಿಂತ ಪ್ರದರ್ಶನ ಮನೋಭಾವವೇ ತುಂಬಿರುತ್ತದೆ.....

ಇಲ್ಲಿ ಮತ್ತೊಂದು ಗಮನಸೆಳೆಯುವ ವಿಷಯವೆಂದರೆ ಈ ಮುಕ್ತತೆ ಕೇವಲ ಮನರಂಜನೆಗೆ ಮಾತ್ರ ಸೀಮಿತ. ಅದನ್ನು ನಿಜ ಬದುಕಿನಲ್ಲಿ ಅಥವಾ ಸಮಾಜದಲ್ಲಿ ಅಳವಡಿಸಿಕೊಂಡರೆ ಸಾಮಾನ್ಯ ಜನ ಇಷ್ಟಪಡುವುದಿಲ್ಲ. ಅಷ್ಟೇ ಏಕೆ ರಿಯಾಲಿಟಿ ಶೋಗಳ ಪಾತ್ರಧಾರಿಗಳು ಮತ್ತು ತೀರ್ಪುಗಾರರು ಸಹ ಒಪ್ಪುವುದಿಲ್ಲ. ಈ ನಡವಳಿಕೆ ಸಾಮಾನ್ಯರ ಜೀವನದಲ್ಲಿ ಅಶ್ಲೀಲ ಅಥವಾ ಅತಿರೇಕದಂತೆ ಕಾಣುತ್ತದೆ.....

ವಾಸ್ತವ ಮತ್ತು ಭ್ರಮೆಯ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ಸಾಮಾನ್ಯ ಜನ ಸೋಲುತ್ತಾರೆ. ಆಗ ಈ ರೀತಿಯ ಕಾರ್ಯಕ್ರಮಗಳ ದುಷ್ಪರಿಣಾಮ ಗೋಚರಿಸುತ್ತದೆ.....

ಮೇಲ್ನೋಟಕ್ಕೆ ಮತ್ತು ತಕ್ಷಣಕ್ಕೆ ಇದು ಕಾಣಬರುವುದಿಲ್ಲ. ಆದರೆ ನಿಧಾನವಾಗಿ ಮನಸ್ಸುಗಳಲ್ಲಿ ಇದು ಬೇರು ಬಿಡತೊಡಗುತ್ತದೆ.

ವಾರಾಂತ್ಯದಲ್ಲಿ ರಾತ್ರಿಯ ವೇಳೆ ಈ ಕಾರ್ಯಕ್ರಮಗಳು ಪ್ರಸಾರವಾಗುವುದರಿಂದ ಇದರ ವೀಕ್ಷಕರು ಜಾಸ್ತಿ ಮತ್ತು ಹೆಚ್ಚು ಜನಪ್ರಿಯತೆ ಪಡೆದಿವೆ. ಬಹುತೇಕ ಮನೆಗಳ‌ ಟಿವಿಗಳಲ್ಲಿ ಇದೇ ಕಾರ್ಯಕ್ರಮಗಳನ್ನು ನೋಡುತ್ತಿರುತ್ತಾರೆ.....

ಸಂಗೀತ, ನೃತ್ಯ, ಜ್ಞಾನಾರ್ಜನೆಯ ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳು ಸ್ವಾಗತಾರ್ಹ. ಆದರೆ ಅದಕ್ಕಿಂತ ಭಿನ್ನವಾದ ಕೆಲವು ಕಾರ್ಯಕ್ರಮಗಳು ಒಂದು ರೀತಿಯಲ್ಲಿ ಅಪಾಯಕಾರಿ ಹಂತವನ್ನು ದಾಟಿ ಮಿತಿಮೀರಿದ ಪ್ರಮಾಣದಲ್ಲಿ ಮುಂದುವರೆದಿವೆ. ಹಾಸ್ಯ ಮನರಂಜನೆಯ ಹೆಸರಿನಲ್ಲಿ ಸಮಾಜದ ವಿರುದ್ಧ ಮೌಲ್ಯಗಳಿಗೆ ಮಾನ್ಯತೆ ದೊರೆಯುವಂತೆ ಮಾಡುತ್ತಿವೆ......

ಹೆಣ್ಣು ಗಂಡಿನ ಸಂಬಂಧಗಳನ್ನು ಬಿಂಬಿಸುವ ಅವರ ವರ್ತನೆಗಳನ್ನು ಪ್ರದರ್ಶಿಸುವ ಸನ್ನಿವೇಶಗಳಲ್ಲಿ ಈ ಮುಕ್ತತೆ ಹೆಚ್ಚು ವ್ಯಾಪಕವಾಗಿದೆ. ಇನ್ನೂ ಮದುವೆಯಾಗದ, ಮದುವೆಯ ಬಗ್ಗೆ ಕನಸುಗಳನ್ನು ಕಾಣುತ್ತಿರುವ ಯುವಕ ಯುವತಿಯರ ಮನಸ್ಸುಗಳಲ್ಲಿ ಇದು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಏಕೆಂದರೆ ಸಾಮಾನ್ಯ ಮನುಷ್ಯರ ದೇಹ ಮತ್ತು ಮನಸ್ಸುಗಳ ವಾಸ್ತವ ಪರಿಸ್ಥಿತಿ ಇಲ್ಲಿಗಿಂತ ಬೇರೆಯದೇ ಆಗಿರುತ್ತದೆ. ಈ ಕಾಲ್ಪನಿಕ ಲೋಕದ ಸನ್ನಿವೇಶಗಳು ವಾಸ್ತವವನ್ನು ಭ್ರಮೆಯಾಗಿಸಿ ವಂಚಿಸುತ್ತವೆ.....

ನೋಡಲು‌ ಹಾಸ್ಯ ಮತ್ತು ಮನರಂಜನೆ ಎನಿಸಿದರೂ ಮನದಾಳದಲ್ಲಿ ನಮ್ಮನ್ನೇ ನಾವು ಪಾತ್ರವಾಗಿಸಿ ಆ ದೃಶ್ಯಗಳನ್ನು ಕಲ್ಪಿಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇವೆ..... 

ಆದ್ದರಿಂದ ಹೆಚ್ಚು ಈ ರೀತಿಯ ರಿಯಾಲಿಟಿ ಶೋಗಳನ್ನು ನೋಡುವವರು ದಯವಿಟ್ಟು ಅದನ್ನು ನಕ್ಕು ಅಲ್ಲಿಯೇ ಮರೆತು ಬಿಡಿ. ನಿಜವಾದ ರಿಯಾಲಿಟಿ ಶೋ ವಾಸ್ತವ ಜಗತ್ತಿನ ಅಪ್ಪ ಅಮ್ಮ ಸಂಬಂಧಿಕರು ಸುತ್ತಮುತ್ತಲಿನ ಜನರುಗಳ ಜೀವನಶೈಲಿಯೇ ಆಗಿರುತ್ತದೆ. ಈ ಸೆಲೆಬ್ರಿಟಿಗಳದು ರಿಯಾಲಿಟಿ ಶೋ ಅಲ್ಲ ರಿಯಾಲಿಟಿ ಹೆಸರಿನ ಡೂಪ್ಲಿಕೇಟ್ ಶೋಗಳು.

ಅದರ ಬಗ್ಗೆ ಎಚ್ಚರಿಕೆಯಿಂದಿರಿ.....
ಮಾಧ್ಯಮಗಳನ್ನು ನಿಯಂತ್ರಿಸುವುದು  ಸಾಧ್ಯವಿಲ್ಲ. ಆದರೆ ವೈಯಕ್ತಿಕ ಮಟ್ಟದಲ್ಲಿ ನಾವುಗಳು ಹೆಚ್ಚು ಪ್ರಬುದ್ಧರಾಗುವ ಮುಖಾಂತರ, ನಮ್ಮ ವ್ಯಕ್ತಿತ್ವಗಳನ್ನು ಉನ್ನತ ದರ್ಜೆಗೆ ಏರಿಸಿಕೊಳ್ಳುವ ಮೂಲಕ, ವಾಸ್ತವ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ವಿಧಾನದಿಂದ ಇದನ್ನು ನಿರ್ಲಕ್ಷಿಸಬಹುದು ಮತ್ತು ಅನಾಹುತಗಳನ್ನು ತಡೆಯಬಹುದು. ಆ ನಿಟ್ಟಿನಲ್ಲಿ ಮತ್ತಷ್ಟು ಕ್ರಿಯಾತ್ಮಕವಾಗಿ ಯೋಚಿಸಿ ಎಂದು ಮನವಿ ಮಾಡಿಕೊಳ್ಳುತ್ತಾ.....
ಲೇಖನ:ವಿವೇಕಾನಂದ. ಎಚ್. ಕೆ.9663750451..

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ