ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ತಾಮ್ರದ ಬಿಲ್ಲೆ ತಾಯಿ ಮಕ್ಕಳನ್ನ ದೂರ ಮಾಡಿತ್ತಂತೆ" ಎನ್ನುವ ಗಾದೆ ಮಾತಿನಂತೆ...
ಹಳ್ಳಿಯ ಅಂಗಳದಲ್ಲಿ ಕೂತು ಹಿರಿಯರು ಮಾತನಾಡುವಾಗ ಈ ಗಾದೆಯನ್ನು ಆಗಾಗ ಹೇಳುತ್ತಿದ್ದರು. ತಾಮ್ರದ ಬಿಲ್ಲೆ, ಅಂದರೆ ಸಣ್ಣ ನಾಣ್ಯ. ಅದರ ಆಸೆಗೆ ಬಿದ್ದು ತಾಯಿ ಮಕ್ಕಳನ್ನ, ಇಲ್ಲವೇ ಮಕ್ಕಳು ತಾಯಿಯನ್ನ ದೂರ ಮಾಡುತ್ತಾಳೆ ಎನ್ನುವ ಅರ್ಥಕ್ಕಿಂತ ಹಣ, ಹಣ ಎಂತಹ ಸಂಬಂಧಗಳನ್ನು ಎಷ್ಟು ಕ್ರೂರವಾಗಿ ಕತ್ತರಿಸಬಹುದು ಎನ್ನುವುದನ್ನು ನಮ್ಮ ಹಿರಿಯರು ಎಷ್ಟು ಸರಳವಾಗಿ ಹೇಳಿದ್ದಾರೆ ನೋಡಿ. ಅವರು ಅರ್ಥಶಾಸ್ತ್ರ ಓದಿರಲಿಲ್ಲ, ಮನೋವಿಜ್ಞಾನ ಓದಿರಲಿಲ್ಲ ಆದರೆ ಬದುಕನ್ನು ಓದಿದ್ದರು. ಬದುಕಿನ ಪುಸ್ತಕದಲ್ಲಿ ಹಣ ಎನ್ನುವುದು ಒಂದು ಪಾತ್ರ ಅಷ್ಟೆ, ಅದು ಇಡೀ ಕಥೆಯಲ್ಲ ಎನ್ನುವುದು ಅವರಿಗೆ ಗೊತ್ತಿತ್ತು. ಇಂದು ನಾವು ಆ ಪುಸ್ತಕವನ್ನೇ ಮರೆತಿದ್ದೇವೆ. ಪಾತ್ರವನ್ನೇ ಕಥೆ ಎಂದುಕೊಂಡು ಅದರ ಬೆನ್ನು ಹತ್ತಿ ಓಡುತ್ತಿದ್ದೇವೆ.
ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೆ ನಮ್ಮ ಮನಸ್ಸಿನಲ್ಲಿ ಓಡುವ ಒಂದೇ ಒಂದು ಚಿಂತನೆ ಎಂದರೆ ರೊಕ್ಕ. ಇನ್ನೂ ಸ್ವಲ್ಪ ದುಡ್ಡು ಬಂದರೆ? ಇನ್ನೊಂದು ಸೈಟ್ ತೆಗೆದುಕೊಂಡರೆ? ಮಗನಿಗೆ ಇನ್ನೂ ದೊಡ್ಡ ಪ್ಯಾಕೇಜ್ ಬಂದರೆ? ನಮ್ಮ ಓಟಕ್ಕೆ ಕೊನೆಯೇ ಇಲ್ಲ. ಈ ಓಟದಲ್ಲಿ ನಾವು ಏನನ್ನು ಗೆಲ್ಲುತ್ತಿದ್ದೇವೆ ಮತ್ತು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದನ್ನೇ ಮರೆತಿದ್ದೇವೆ. ಒಂದು ಕಾಲದಲ್ಲಿ ಬದುಕು ನಮ್ಮ ಕೈಯಲ್ಲಿತ್ತು. ಇಂದು ಬದುಕು ಬ್ಯಾಂಕ್ ಬ್ಯಾಲೆನ್ಸ್ ಕೈಯಲ್ಲಿದೆ. ಒಂದು ಕಾಲದಲ್ಲಿ ನಾವು ಮನುಷ್ಯರನ್ನು ಗಳಿಸುತ್ತಿದ್ದೆವು. ಇಂದು ನಾವು ನೋಟುಗಳನ್ನು ಗಳಿಸುತ್ತಿದ್ದೇವೆ.
ಈ ಹಣದ ಹಿಂದಿನ ಓಟ ಯಾಕೆ ಶುರುವಾಯಿತು ಎಂದು ಸ್ವಲ್ಪ ಆಳವಾಗಿ ಯೋಚಿಸಿದರೆ ಅದರ ಹಿಂದೆ ಭಯವಿದೆ. ಹೌದು, ನಾಳೆ ಏನಾಗುತ್ತದೆ ಎನ್ನುವ ಭಯ, ಸಮಾಜದಲ್ಲಿ ನನ್ನ ಸ್ಥಾನ ಏನು ಎನ್ನುವ ಭಯ. ನನ್ನ ಮಕ್ಕಳು ನನ್ನನ್ನು ಗೌರವಿಸುತ್ತಾರೋ ಇಲ್ಲವೋ ಎನ್ನುವ ಭಯ. ನಾಲ್ಕು ಜನರ ಮುಂದೆ ನನ್ನ ತಲೆ ತಗ್ಗುತ್ತದೋ ಎನ್ನುವ ಭಯ. ಈ ಎಲ್ಲಾ ಭಯಗಳನ್ನು ಮುಚ್ಚಿಕೊಳ್ಳಲು ನಾವು ಹಣ ಎನ್ನುವ ಮುಖವಾಡವನ್ನು ಹಾಕಿಕೊಳ್ಳುತ್ತೇವೆ. ಹಣ ಬಂದರೆ ಭಯ ಹೋಗುತ್ತದೆ ಎಂದು ನಂಬಿದ್ದೇವೆ. ಆದರೆ ವಾಸ್ತವದಲ್ಲಿ ಹಣ ಬಂದಂತೆಲ್ಲಾ ಭಯ ಇನ್ನೂ ಜಾಸ್ತಿಯಾಗುತ್ತದೆ. ಸಾವಿರ ಇದ್ದವನಿಗೆ ಹತ್ತು ಸಾವಿರದ ಭಯ, ಲಕ್ಷ ಇದ್ದವನಿಗೆ ಹತ್ತು ಲಕ್ಷದ ಭಯ. ಕಾರು ಇದ್ದವನಿಗೆ ದೊಡ್ಡ ಕಾರಿನ ಭಯ. ಮನೆ ಇದ್ದವನಿಗೆ ಇನ್ನೊಂದು ಬಂಗಲೆ ಕಟ್ಟುವ ಭಯ. ಮನೋವಿಜ್ಞಾನದಲ್ಲಿ ಇದಕ್ಕೆ ಒಂದು ಹೆಸರಿದೆ, ಸಂತೋಷದ ಟ್ರೇಡ್ ಮಿಲ್. ನೀವು ಟ್ರೆಡ್ ಮಿಲ್ ಮೇಲೆ ಎಷ್ಟು ಓಡಿದರೂ ನೀವು ಅದೇ ಜಾಗದಲ್ಲೇ ಇರುತ್ತೀರಿ ನಿಮ್ಮ ದೇಹ ಸುಸ್ತಾಗುತ್ತದೆ ಆದರೆ ದೂರ ಸಾಗುವುದಿಲ್ಲ. ಹಣದ ವಿಷಯದಲ್ಲೂ ಹಾಗೆಯೇ. ನಾವು ಓಡುತ್ತೇವೆ, ಸುಸ್ತಾಗುತ್ತೇವೆ, ಆದರೆ ನೆಮ್ಮದಿ ಎನ್ನುವ ಊರು ಮಾತ್ರ ಬರುವುದೇ ಇಲ್ಲ. ಹೊಸ ಮೊಬೈಲ್ ತೆಗೆದುಕೊಂಡಾಗ ಎರಡು ದಿನ ಖುಷಿಯಾಗುತ್ತದೆ. ಮೂರನೇ ದಿನ ಅದು ಹಳೆಯದಾಗುತ್ತದೆ. ಹೊಸ ಕಾರು ತೆಗೆದುಕೊಂಡಾಗ ಒಂದು ತಿಂಗಳು ಖುಷಿಯಾಗುತ್ತದೆ. ನಂತರ ಪಕ್ಕದ ಮನೆಯವರು ಇನ್ನೂ ದೊಡ್ಡ ಕಾರು ತೆಗೆದುಕೊಂಡಿದ್ದಾರೆ ಎಂದು ಗೊತ್ತಾಗಿ ನಮ್ಮ ಖುಷಿ ಕರಗಿ ಹೋಗುತ್ತದೆ. ನಮ್ಮ ಖುಷಿ ನಮ್ಮ ಬಳಿ ಇರುವುದರಲ್ಲಿ ಇಲ್ಲ, ಇತರರ ಬಳಿ ಇಲ್ಲದ್ದರಲ್ಲಿ ಇದೆ ಎನ್ನುವ ಮನಸ್ಥಿತಿ ನಮ್ಮನ್ನು ಈ ಓಟಕ್ಕೆ ದೂಡುತ್ತದೆ.
ಈ ಓಟದಿಂದ ಮೊದಲು ಹಾಳಾಗುವುದು ನಮ್ಮ ಮನ ಮನೆ, ಒಂದು ಕಾಲದಲ್ಲಿ ಸಂಜೆ ಆರು ಗಂಟೆಗೆ ಎಲ್ಲರೂ ಮನೆಗೆ ಬರುತ್ತಿದ್ದರು. ಅಂಗಳದಲ್ಲಿ ಕೂತು ಮಾತನಾಡುತ್ತಿದ್ದರು.
ಇಂದು ಮನೆಗೆ ಬರುವುದು ರಾತ್ರಿ ಒಂಬತ್ತಕ್ಕೆ. ಬಂದರೂ ಮೊಬೈಲ್ ನಲ್ಲಿ ಮಾರ್ಕೆಟ್ ನೋಡುವುದು, ಮ್ಯೂಚುವಲ್ ಫಂಡ್ ನೋಡುವುದು. ಮಕ್ಕಳು ಏನೋ ಹೇಳಲು ಬಂದರೆ, ಸ್ವಲ್ಪ ಇರು, ಒಂದು ಮುಖ್ಯ ಕೆಲಸ ಇದೆ ಎನ್ನುತ್ತೇವೆ. ಹೆಂಡತಿ ಕಾಫಿ ತಂದರೆ ಅದನ್ನು ಕುಡಿಯುತ್ತಾ ಲ್ಯಾಪ್ಟಾಪ್ ನೋಡುತ್ತೇವೆ. ನಾವು ಮನೆಯಲ್ಲಿದ್ದೇವೆ, ಆದರೆ ಮನೆಯವರ ಜೊತೆ ಇಲ್ಲ. ದೇಹ ಮನೆಯಲ್ಲಿದೆ, ಮನಸ್ಸು ಮಾರುಕಟ್ಟೆಯಲ್ಲಿದೆ. ಇದು ಎಂತಹ ದುರಂತ ನೋಡಿ, ನಾವು ಕಷ್ಟಪಡುವುದು ಮಕ್ಕಳಿಗಾಗಿ, ಕುಟುಂಬಕ್ಕಾಗಿ ಎನ್ನುತ್ತೇವೆ. ಆದರೆ ಆ ಕಷ್ಟಪಡುವ ಭರದಲ್ಲಿ ಮಕ್ಕಳ ಬಾಲ್ಯವನ್ನೇ, ಕುಟುಂಬದ ಜೊತೆಗಿನ ಸಮಯವನ್ನೇ ಕಳೆದುಕೊಳ್ಳುತ್ತೇವೆ. ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ನೆನಪಿರುವುದಿಲ್ಲ ನೀವು ಅವರ ಜೊತೆ ಆಟವಾಡಿದ ಕ್ಷಣ, ಅವರಿಗೆ ಕಥೆ ಹೇಳಿದ ರಾತ್ರಿ, ಅವರನ್ನು ತಬ್ಬಿಕೊಂಡು ಮಲಗಿದ ದಿನ ಮಾತ್ರ ನೆನಪಿರುತ್ತದೆ. ನಾವು ಬ್ಯಾಲೆನ್ಸ್ ಹೆಚ್ಚು ಮಾಡುವ ಭರದಲ್ಲಿ ಈ ನೆನಪುಗಳ ಖಾತೆಯನ್ನು ಖಾಲಿ ಮಾಡುತ್ತಿದ್ದೇವೆ.
ಇನ್ನೊಂದು ದೊಡ್ಡ ನಷ್ಟ ಎಂದರೆ ಆರೋಗ್ಯ, ಹಣ ಗಳಿಸುವ ಭರದಲ್ಲಿ ನಾವು ನಮ್ಮ ದೇಹವನ್ನು ಒಂದು ಯಂತ್ರದಂತೆ ಬಳಸುತ್ತೇವೆ, ಬೆಳಿಗ್ಗೆ ಸರಿಯಾಗಿ ತಿಂಡಿ ಇಲ್ಲ, ಮಧ್ಯಾಹ್ನ ಜಂಕ್ ಫುಡ್, ರಾತ್ರಿ ನಿದ್ದೆ ಇಲ್ಲ ವ್ಯಾಯಾಮಕ್ಕೆ ಸಮಯವಿಲ್ಲ, ಯೋಚನೆಗೆ ನೆಮ್ಮದಿ ಇಲ್ಲ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ನಿದ್ರಾಹೀನತೆ ಇವೆಲ್ಲವೂ ಈ ಓಟದ ಬಹುಮಾನಗಳೇ, ನಾವು ದುಡ್ಡು ಮಾಡಿ ಆಸ್ಪತ್ರೆಗೆ ಕೊಡುತ್ತೇವೆ ಆಸ್ಪತ್ರೆಯಿಂದ ಬಂದು ಮತ್ತೆ ದುಡ್ಡು ಮಾಡಲು ಓಡುತ್ತೇವೆ. ಇದು ಒಂದು ವಿಷವರ್ತುಲ, ಹಣ ಆರೋಗ್ಯವನ್ನು ತರುತ್ತದೆ ಎಂದುಕೊಂಡಿದ್ದೆವು. ಆದರೆ ಅತಿಯಾದ ಹಣದ ದಾಹವೇ ಆರೋಗ್ಯವನ್ನು ಕಸಿದುಕೊಳ್ಳುತ್ತಿದೆ, ನಮ್ಮ ಹಿರಿಯರು ಹೇಳುತ್ತಿದ್ದರು, ಆರೋಗ್ಯವೇ ಭಾಗ್ಯ ಎಂದು ಅದನ್ನು ನಾವು ಗೋಡೆಯ ಮೇಲೆ ಬರೆದು ಇಟ್ಟಿದ್ದೇವೆ, ಆದರೆ ಬದುಕಿನಲ್ಲಿ ಅಳವಡಿಸಿಕೊಂಡಿಲ್ಲ.
ಸಮಾಜದ ದೃಷ್ಟಿಯಿಂದ ನೋಡಿದರೆ ಈ ಓಟ ಇನ್ನೂ ಅಪಾಯಕಾರಿ, ಮೊದಲು ನಾವು ಮನುಷ್ಯನನ್ನು ಅವನ ಗುಣದಿಂದ ಅಳೆಯುತ್ತಿದ್ದೆವು. ಇವನು ಒಳ್ಳೆಯವನು, ಪ್ರಾಮಾಣಿಕ, ಸಹಾಯ ಮಾಡುವವನು ಎಂದು ಇಂದು ಮನುಷ್ಯನನ್ನು ಅವನ ಆದಾಯದಿಂದ ಅಳೆಯುತ್ತೇವೆ. ಎಷ್ಟು ಸಂಬಳ? ಎಷ್ಟು ಆಸ್ತಿ? ಎಂಬುದೇ ಅವನ ಅರ್ಹತೆ. ಹಣವೇ ಮನುಷ್ಯನ ಮೌಲ್ಯವನ್ನು ನಿರ್ಧರಿಸುವ ಕಾಲ ಇದು. ಇದರಿಂದಾಗಿ ಪ್ರಾಮಾಣಿಕತೆ, ದಯೆ, ಕರುಣೆ ಎನ್ನುವ ಪದಗಳು ನಿಧಾನವಾಗಿ ನಮ್ಮ ನಿಘಂಟಿನಿಂದ ಮಾಯವಾಗುತ್ತಿವೆ. ಎಲ್ಲವೂ ಲಾಭ ನಷ್ಟದ ಲೆಕ್ಕಾಚಾರವಾಗಿದೆ. ಸಂಬಂಧಗಳೂ ಕೂಡ. ಈ ಸಂಬಂಧದಿಂದ ನನಗೆ ಏನು ಲಾಭ? ಈ ಪರಿಚಯದಿಂದ ಏನು ಉಪಯೋಗ? ಎಂದು ಲೆಕ್ಕ ಹಾಕುವ ಮನಸ್ಥಿತಿ ಬೆಳೆದಿದೆ. ತಾಮ್ರದ ಬಿಲ್ಲೆ ತಾಯಿ ಮಕ್ಕಳನ್ನು ದೂರ ಮಾಡಿದ ಕಥೆ ಇಂದು ಪ್ರತಿ ಮನೆಯಲ್ಲೂ ನಡೆಯುತ್ತಿದೆ. ಆಸ್ತಿಗಾಗಿ ಅಣ್ಣ ತಮ್ಮಂದಿರು ಕೋರ್ಟಿಗೆ ಹೋಗುತ್ತಾರೆ. ದುಡ್ಡಿಗಾಗಿ ಮಗ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾನೆ.
ಹಾಗಾದರೆ ಹಣ ಬೇಡವೇ? ಖಂಡಿತ ಬೇಕು. ಹಣವಿಲ್ಲದೆ ಬದುಕು ಕಷ್ಟ, ಹಣ ಬದುಕಿಗೆ ಬೇಕಾದ ಇಂಧನ, ಕಾರಿಗೆ ಪೆಟ್ರೋಲ್ ಬೇಕು, ಆದರೆ ಪೆಟ್ರೋಲೇ ಕಾರಿನ ಗುರಿಯಲ್ಲ. ಕಾರಿನ ಗುರಿ ಪ್ರಯಾಣ, ಹಾಗೆಯೇ ಬದುಕಿನ ಗುರಿ ನೆಮ್ಮದಿ, ಸಂತೋಷ, ಪ್ರೀತಿ. ಹಣ ಅದಕ್ಕೆ ಬೇಕಾದ ಇಂಧನ ಅಷ್ಟೆ. ಇಂಧನವನ್ನು ಟ್ಯಾಂಕ್ ತುಂಬಾ ತುಂಬಿಕೊಂಡು ಕಾರನ್ನು ನಿಲ್ಲಿಸಿಬಿಟ್ಟರೆ ಏನು ಪ್ರಯೋಜನ? ನಾವು ಇಂದು ಅದನ್ನೇ ಮಾಡುತ್ತಿದ್ದೇವೆ ಇಂಧನ ತುಂಬುತ್ತಲೇ ಇದ್ದೇವೆ, ಪ್ರಯಾಣವನ್ನೇ ಮರೆತಿದ್ದೇವೆ. ಹಣ ಬೇಕು, ಆದರೆ ಎಷ್ಟು ಬೇಕು ಎನ್ನುವ ಪ್ರಜ್ಞೆ ಬೇಕು. ನಮ್ಮ ಅಗತ್ಯಕ್ಕಾಗಿ ದುಡಿಯುವುದು ಬೇರೆ, ಇತರರನ್ನು ತೋರಿಸುವುದಕ್ಕಾಗಿ ದುಡಿಯುವುದು ಬೇರೆ ಅಗತ್ಯಕ್ಕೆ ದುಡಿದಾಗ ನೆಮ್ಮದಿ ಇರುತ್ತದೆ. ಆಡಂಬರಕ್ಕೆ ದುಡಿದಾಗ ಆತಂಕ ಇರುತ್ತದೆ.

ಈ ಓಟವನ್ನು ನಿಲ್ಲಿಸುವುದು ಹೇಗೆ? ಇದು ಒಂದೇ ದಿನದಲ್ಲಿ ಆಗುವ ಕೆಲಸವಲ್ಲ ಇದಕ್ಕೆ ಸಣ್ಣ ಸಣ್ಣ ಅಭ್ಯಾಸಗಳು ಬೇಕು. ಪ್ರತಿದಿನ ಬೆಳಿಗ್ಗೆ ಎದ್ದಾಗ ನನ್ನ ಬಳಿ ಇರುವುದೇನು ಎಂದು ಯೋಚಿಸಿ. ನನ್ನ ಆರೋಗ್ಯ, ನನ್ನ ಕುಟುಂಬ, ನನ್ನ ಮನೆ, ನನ್ನ ನೆಮ್ಮದಿ. ಇವುಗಳಿಗೆ ಬೆಲೆ ಕಟ್ಟಲು ಸಾಧ್ಯವೇ? ಸಾಕು ಎನ್ನುವ ಪದವನ್ನು ಕಲಿಯುವುದು. ಸಾಕು ಎನ್ನುವುದು ಸೋಲಲ್ಲ, ಅದು ಗೆಲುವು. ಇಷ್ಟು ಸಾಕು ಎಂದಾಗ ಮಾತ್ರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ, ಇಲ್ಲದಿದ್ದರೆ ಬಕೆಟ್ ತೂತಾಗಿರುವಂತೆ ಎಷ್ಟು ಸುರಿದರೂ ತುಂಬುವುದೇ ಇಲ್ಲ. ಹಾಗೆಯೇ ಸಮಯವನ್ನು ಹಣಕ್ಕಿಂತ ದೊಡ್ಡದಾಗಿ ಕಾಣುವುದು. ಹಣವನ್ನು ಮತ್ತೆ ಗಳಿಸಬಹುದು, ಆದರೆ ಕಳೆದುಹೋದ ಸಮಯವನ್ನು ಎಂದಿಗೂ ಮರಳಿ ತರಲು ಸಾಧ್ಯವಿಲ್ಲ. ಮಕ್ಕಳ ಜೊತೆ ಒಂದು ಗಂಟೆ ಆಟವಾಡುವುದು, ತಂದೆ ತಾಯಿಯ ಜೊತೆ ಒಂದು ಸಂಜೆ ಮಾತನಾಡುವುದು, ಇವುಗಳಿಗೆ ಕೋಟಿ ರೂಪಾಯಿ ಬೆಲೆ ಇದೆ. ನಮ್ಮ ಬಳಿ ಇರುವ ಸಮಯವೇ ನಿಜವಾದ ಚಿನ್ನ, ಇದನ್ನು ಉಳಿಸಿಕೊಳ್ಳುವುದು ಬಿಟ್ಟು ಹಣದ ಹಿಂದೆ ಹೋಗಿ ನಮ್ಮ ಸಂಬಂಧಗಳು, ನಮ್ಮ ಆರೋಗ್ಯ, ನಮ್ಮ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ.
ನಾವು ಸಾಯುವಾಗ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಇದೆ ಎಂದು ಯಾರೂ ಮಾತನಾಡುವುದಿಲ್ಲ. ನಾವು ಎಷ್ಟು ಜನರ ಮನಸ್ಸಿನಲ್ಲಿ ಇದ್ದೇವೆ ಎಂದು ಮಾತನಾಡುತ್ತಾರೆ. ನೀವು ಎಷ್ಟು ಆಸ್ತಿ ಮಾಡಿದ್ದೀರಿ ಎಂದು ಕೇಳುವುದಿಲ್ಲ, ಎಷ್ಟು ಜನರ ಬದುಕಿಗೆ ಬೆಳಕಾಗಿದ್ದೀರಿ ಎಂದು ಕೇಳುತ್ತಾರೆ. ಆದ್ದರಿಂದ ರೊಕ್ಕದ ಬೆನ್ನು ಹತ್ತಿ ಓಡುವ ಮೊದಲು ಒಂದು ಕ್ಷಣ ನಿಂತು ಯೋಚಿಸಿ. ನಾವು ಓಡುತ್ತಿರುವುದು ಬದುಕಿಗಾಗಿ ಅಥವಾ ಬದುಕನ್ನು ಬಿಟ್ಟು ಓಡುತ್ತಿದ್ದೇವೆಯೇ ಎಂದು. ತಾಮ್ರದ ಬಿಲ್ಲೆಗಾಗಿ ತಾಯಿ ಮಕ್ಕಳನ್ನು ದೂರ ಮಾಡುವ ತಪ್ಪನ್ನು ನಾವು ಮಾಡಬಾರದು. ಹಣವಿರಲಿ, ಆದರೆ ಮನಸ್ಸಿನಲ್ಲಿ ಅಲ್ಲ, ಕೈಯಲ್ಲಿ ಇರಲಿ, ಕೈಯಲ್ಲಿರುವ ಹಣ ದಾನ ಮಾಡುತ್ತದೆ, ಮನಸ್ಸಿನಲ್ಲಿರುವ ಹಣ ಅಹಂಕಾರ ತರುತ್ತದೆ. ನಾವು ದಾನಿಗಳಾಗಬೇಕೇ ಹೊರತು ಅಹಂಕಾರಿಗಳಲ್ಲ.
ನನ್ನುಡಿ: ರೊಕ್ಕ ಎಣಿಸುವುದರಲ್ಲಿ ಬದುಕನ್ನು ಕಳೆಯಬೇಡಿ, ಬದುಕನ್ನು ಎಣಿಸುವಷ್ಟು ರೊಕ್ಕ ಗಳಿಸಿ ಸಾಕು. ಖಾತೆಯಲ್ಲಿ ಹಣವಿದ್ದರೆ ಬ್ಯಾಂಕ್ ನವರು ಮೆಚ್ಚುತ್ತಾರೆ, ಮನಸ್ಸಿನಲ್ಲಿ ಪ್ರೀತಿಯಿದ್ದರೆ ಜನರು ಮತ್ತು ಬದುಕು ನಿಮ್ಮನ್ನು ಮೆಚ್ಚುತ್ತದೆ.
ಲೇಖನ:ಡಾ. ಉಮೇಶ್ ಬಾಬು ಮಠದ್ (ಉಬಾಮ), ಸಾಹಿತಿ ಹಾಗೂ ಸಾಮಾಜಿಕ ಚಿಂತಕರು.




