ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಮ್ಮ ನಾಡಿನ ಸಂಸ್ಕೃತಿ ನಮ್ಮ ಕ್ರೀಡಾ ಸಮಿತಿ ವತಿಯಿಂದ 10ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಭುವನೇಶ್ವರಿ ನಗರದ ಎನ್.ಮುನಿನಂಜಪ್ಪ ಅವರ ಜಮೀನಿನಲ್ಲಿ ನಡೆದ ಗಾಳಿಪಟ ಸ್ಪರ್ಧೆಯಲ್ಲಿ ಪುರುಷರು, ಮಕ್ಕಳು, ತಂಡಗಳು ಭಾಗವಹಿಸಿ, ಹಾರಿಬಿಟ್ಟಿದ್ದ ವಿವಿಧ ನಮೂನೆಯ ಚಿತ್ತಾಕರ್ಷಕ ಪಟಗಳು ಬಾನಂಗಳದಲ್ಲಿ ಹಾರಾಡಿ ಗಮನ ಸೆಳೆದವು.
ಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ಗಾಳಿಪಟಗಳನ್ನು ವೀಕ್ಷಿಸುವುದರೊಂದಿಗೆ ತಾವು ತಂದಿದ್ದ ಸಣ್ಣ ಪಟಗಳನ್ನು ಹಾರಿಸಿ ಖುಷಿ ಪಟ್ಟರು.
ಗಾಳಿಪಟ ಕಲೆಗೆ ಉತ್ತೇಜನ ಅಗತ್ಯ :
ಗಾಳಿಪಟ ಹಾರಿಸುವ ಮೂಲಕ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭಾ ಸದಸ್ಯ ಎಚ್.ಎಸ್.ಶಿವಶಂಕರ್, ದೊಡ್ಡಬಳ್ಳಾಪುರ ಗಾಳಿಪಟ ಕಲೆಗೆ ಹೆಸರಾಗಿದೆ. ಗಾಳಿಪಟ ಸ್ಪರ್ಧೆ ಹಾಗೂ ಉತ್ಸವಗಳ ಆಯೋಜನೆಯಿಂದ ಗಾಳಿಪಟ ಕಲೆಗೆ ಉತ್ತೇಜನ ದೊರೆಯುತ್ತದೆ. ಇಲ್ಲಿನ ಗಾಳಿಪಟ ಕಲಾವಿದರು, ರಾಷ್ಟ್ರೀಯ, ಅಂತರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ, ಊರಿಗೆ ಕೀರ್ತಿ ತಂದಿದ್ದಾರೆ. ಗಾಳಿಪಟ ಹಾರಿಸುವ ಕಲೆಯನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ನಾಮಿನಿ ಸದಸ್ಯ ಎಚ್.ವಿ.ಅಖಿಲೇಶ್, ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶರತ್ ಪಟೇಲ್ ,ನಮ್ಮ ಸಂಸ್ಕೃತಿ ನಮ್ಮ ಕ್ರೀಡಾ ಸಮಿತಿ ಅಧ್ಯಕ್ಷ ಎಂ.ಎಸ್.ರಾಮದಾಸ್, ಕಾರ್ಯದರ್ಶಿ ಶಿವಶಂಕರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ದೇವಾಂಗ ಮಂಡಲಿ ನಿರ್ದೇಶಕ ಎನ್.ಜಿ.ಕುಮಾರ್ ಮುಖಂಡರಾದ ಚೌಡಪ್ಪ, ಮೊದಲಾದವರು ಭಾಗವಹಿಸಿದ್ದರು.



