ಚಂದ್ರವಳ್ಳಿ ನ್ಯೂಸ್, ಸೂಗೂರು:
ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ, ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಸಮೀಪದ ಸೂಗೂರು ಗ್ರಾಮದಲ್ಲಿ "ಮಹಿಳಾ ಸಬಲೀಕರಣ ಹಾಗೂ ಮಹಿಳಾ ಆರೋಗ್ಯ" ಕುರಿತು ಮಹತ್ವದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜ್ಞಾನಿ ಡಾ. ಸರಸ್ವತಿ ಹಾಗೂ ವಿಸ್ತರಣಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮಹಾಲಕ್ಷ್ಮಿ ಅವರು ಮಹಿಳೆಯರು, ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯ ನಿರ್ವಹಣೆ ಹಾಗೂ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ವಿಧಾನಗಳ ಕುರಿತು ಗ್ರಾಮೀಣ ಮಹಿಳೆಯರಿಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಜೊತೆಗೆ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಮನೆಯಲ್ಲಿಯೇ ಕೈಗೊಳ್ಳಬಹುದಾದ ಸುಲಭ ಉದ್ಯೋಗಗಳು ಹಾಗೂ ಅವುಗಳ ಮಾರುಕಟ್ಟೆ (ಮಾರ್ಕೆಟಿಂಗ್) ಅವಕಾಶಗಳ ಕುರಿತು ಅತ್ಯಮೂಲ್ಯ ಮಾರ್ಗದರ್ಶನ ನೀಡಿದರು.
ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ರೂಪಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆಗಳನ್ನು ಹಂಚಿಕೊಂಡರು. ಸಕ್ರಿಯವಾಗಿ ಭಾಗವಹಿಸಿದ ವಿದ್ಯಾರ್ಥಿನಿಯರು: ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ವಿ.ಕೆ. ಕಾವೇರಿ, ಆರ್. ಅರ್ಪಿತಾ, ಎಸ್. ಭಾನುಪ್ರಿಯಾ, ಡಿ. ಇಂದುಮತಿ, ಎಚ್. ಹರ್ಷಿಣಿ, ಕೆ.ಎನ್. ಭಾವನಾ, ಕೆ.ಟಿ. ಕವನ, ಎಚ್.ಡಿ. ಕವಿತಾ, ಎಂ.ವಿ. ಕ್ರಾಂತಿಮಯಿ, ಎಂ.ಎಸ್. ಕೃಷ್ಣಾ ಹಾಗೂ ಎಂ. ನಂದಿನಿ ಅವರು ಕಾರ್ಯಕ್ರಮದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಈ ಜಾಗೃತಿ ಸಭೆಯಲ್ಲಿ ಸೂಗೂರು ಗ್ರಾಮದ ನೂರಾರು ರೈತ ಬಾಂಧವ್ಯರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.




