ಶಿಕ್ಷಕ ವೃತ್ತಿ ಮತ್ತು ಶಿಕ್ಷಕರಿಗೆ ಕೀರ್ತಿ ತಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪರಮೇಶ್ವರ್..

News Desk

ಎಂ.ಎಲ್.ಗಿರಿಧರ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ. ನಿಸ್ವಾರ್ಥ ಸೇವೆಯಿಂದ ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದ ಅತ್ಯುತ್ತಮ ಶಿಕ್ಷಕರಲ್ಲಿ ಹಿರಿಯೂರು ತಾಲೂಕಿನ ಹೊಸಹಟ್ಟಿ ಮ್ಯಾಕ್ಲೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರ್ ಟಿ ಪರಮೇಶ್ವರಪ್ಪನವರು ಒಬ್ಬರು.

 ಶ್ರೀಯುತರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ 2024ನೇ ಸಾಲಿನ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಶ್ರೀಯುತರು 2/ 6 /1965 ರಲ್ಲಿ ಜನಿಸಿ 1992-93ರಲ್ಲಿ ಬಳ್ಳಾರಿಯ ಕಾನಮಡಗುವಿನ ಶರಣಬಸವೇಶ್ವರ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶಿಕ್ಷಕ ತರಬೇತಿ ಪಡೆದು 1998ರಲ್ಲಿ ಸಕಲೇಶಪುರ ತಾಲೂಕ ಚಿನ್ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸುತ್ತಾರೆ.

ಗುಡ್ಡಗಾಡಿನ ಶಾಲಾ ವಾತಾವರಣದಲ್ಲಿ ಉತ್ತಮ ಆಟದ ಮೈದಾನ ನಿರ್ಮಿಸುತ್ತಾರೆ. 2002ರಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸೂರಪ್ಪನಹಟ್ಟಿ ಲಂಬಾಣಿ ತಾಂಡಾ ಶಾಲೆಗೆ ವರ್ಗಾವಣೆಗೊಂಡು ಬಂದು ಉತ್ತಮ ಕಲಿಕಾ ವಾತಾವರಣ ನಿರ್ಮಿಸುತ್ತಾರೆ.

2005 ರಲ್ಲಿ ಹಿರಿಯೂರು ತಾಲೂಕಿನ ಜಡೆಗೊಂಡನಹಳ್ಳಿ ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಬಂದು ಸಮುದಾಯದ ಸಹಕಾರದೊಂದಿಗೆ 8,000 ಲೀಟರ್ ಮಳೆ ನೀರು ಕೊಯ್ಲು ನೀರಿನ ವ್ಯವಸ್ಥೆ ಹಾಗೂ ತಾಲೂಕು ಪಂಚಾಯಿತಿ ಸಹಕಾರದೊಂದಿಗೆ ಕಲಾಮಂದಿರ ನಿರ್ಮಿಸಿರುತ್ತಾರೆ. ಈ ಶಾಲೆಯಲ್ಲಿ 50 ಮಲ್ಲಿಗೆ ಗಿಡಗಳು, 6 ತೆಂಗಿನ ಮರಗಳು, 8 ಹುಣಸೆ ಮರಗಳನ್ನು ಬೆಳೆಸಿರುತ್ತಾರೆ.

2007 ರಲ್ಲಿ ರಾಜ್ಯಮಟ್ಟದ ಉತ್ತಮ ಶಾಲಾ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.ಶ್ರೀಯುತರು 2015ರಲ್ಲಿ ಹಿರಿಯೂರು ತಾಲೂಕಿನ ಹೊಸಹಟ್ಟಿ ಮ್ಯಾಕ್ಲೂರಹಳ್ಳಿ ಶಾಲೆಗೆ ವರ್ಗಾವಣೆಗೊಂಡು ಬಂದು ಸಮುದಾಯದ ಸಹಕಾರದೊಂದಿಗೆ ಬಿಸಿ ಊಟದ ಆಸನಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಎರಡು ಶೌಚಾಲಯಗಳು, ಫ್ಯಾನ್ಗಳು ಗ್ರಂಥಾಲಯ ಪುಸ್ತಕಗಳು, ಧ್ವನಿವರ್ದಕ, ಟಿವಿ, ಎರಡು ಕಂಪ್ಯೂಟರ್ ಗಳು ಹಾಗೂ ಶೈಕ್ಷಣಿಕ ಪ್ರಗತಿಗೆ 50,000 ರೂಪಾಯಿಗಳ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಚಾರ್ಟ್ ಗಳ ವ್ಯವಸ್ಥೆ ಮಾಡಿರುತ್ತಾರೆ.

2018-19 ಸಾಲಿನ ಹಸಿರು ಶಾಲೆ ಪ್ರಶಸ್ತಿಯನ್ನು ಶಾಲೆಗೆ ತರುವಲ್ಲಿ ಯಶಸ್ವಿಯಾಗಿರುತ್ತಾರೆ.ಶ್ರೀಯುತರು 11 ಬಾರಿ ರಾಜ್ಯಮಟ್ಟದ ಕಲಿಕೋಪಕರಣ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಮೂರು ಬಾರಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೂರು ಬಾರಿ ರಾಜ್ಯಮಟ್ಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಹಲವಾರು ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಶೈಕ್ಷಣಿಕ ಅನುಭವವನ್ನು ಯುವ ಶಿಕ್ಷಕರಿಗೆ ಉಣಬಡಿಸಿದ್ದಾರೆ.

2009ರಲ್ಲಿ ಚಿತ್ರದುರ್ಗ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುತ್ತಾರೆ. ಸರ್ವರೊಂದಿಗೂ ಬೆರೆಯುವ ಶ್ರೀಯುತರು ಸಮುದಾಯದೊಡಗೂಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಾರಥಿಯಾಗಿ ನಿಂತಿದ್ದಾರೆ. ಇವರ ಸೇವೆಗೆ ಪೋಷಕರು ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಭಿನಂದನೆಗಳೊಂದಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪಡೆದ ಈ ಸಂದರ್ಭದಲ್ಲಿ ಇನ್ನು ಹೆಚ್ಚಿನ ಸಾಧನೆ ಅವರಿಂದ ಬರಲಿ ಎಂದು ಹಾರೈಸುತ್ತಾ ಶ್ರೀಯುತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.ಜಿ.ಮಂಜುನಾಥ, ಸಹ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ಆಲೂರು. 

- Advertisement -  - Advertisement - 
Share This Article
error: Content is protected !!
";