ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೀದರನಲ್ಲಿ ಎರಡು ದಿನಗಳ ಕಾಲ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಭಾಗಿಯಾಗಿ ಯಶಸ್ವಿಯಾಗಿಸಿದ್ದಕ್ಕೆ ತಮಗೆಲ್ಲರಿಗೂ ಧನ್ಯವಾದಗಳನ್ನು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ರಾಜ್ಯ ಮಟ್ಟದ ಸಮ್ಮೇಳನ ಸಂಘಟಿಸುವುದು ಕಷ್ಟದ ಮತ್ತು ಸವಾಲಿನ ಕೆಲಸ. ಕಡಿಮೆ ಅವಧಿಯಲ್ಲಿ ಈ ಸವಾಲನ್ನು ಸಾಧ್ಯವಾಗಿಸಿದ, ಬೀದರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ, ಮುಖ್ಯವಾಗಿ ಸ್ವಾಗತ ಸಮಿತಿ ಅಧ್ಯಕ್ಷರು ಮತ್ತು ಸಚಿವರಾದ ಈಶ್ವರ ಖಂಡ್ರೆ ಅವರ ಪೂರ್ಣ ಸಹಕಾರಕ್ಕೆ, ಈ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮ ವಹಿಸಿದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಅವರ ನೇತೃತ್ವದ ತಂಡಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.
ಜೊತೆಗೆ ಸಾಥ್ ನೀಡಿದ ಸಮಿತಿ ಸದಸ್ಯರಾದ ಅಪ್ಪರಾವ್ ಸೌದಿ, ಶಿವಕುಮಾರಸ್ವಾಮಿ ಸೇರಿದಂತೆ ಅವರ ನೇತೃತ್ವದ ತಂಡಕ್ಕೆ, ಉಪಸಮಿತಿಗಳ ಜವಾಬ್ದಾರಿ ಹೊತ್ತು ಕೆಲಸ ಮಾಡಿದ ತಂಡಗಳಿಗೆ, ಜಿಲ್ಲಾಡಳಿತದ ಸಹಕಾರಕ್ಕಾಗಿ ವಂದನೆಗಳು. ಪತ್ರಕರ್ತರ ಸಮ್ಮೇಳನವನ್ನ ಬೀದರ ನೆಲದ ಹಬ್ಬವಾಗಿಸಿದ, ಬೀದರ ಜಿಲ್ಲೆಯ ಸಮಸ್ತರಿಗೆ ಅಭಿನಂದನೆಗಳು.
ಬಸವನ ನಾಡಿನಲ್ಲಿ ಈ ಸಮ್ಮೇಳನ ವಿಭಿನ್ನವಾಗಿ ಆಯೋಜಿಸಲು ಮತ್ತು ಅರ್ಥಪೂರ್ಣವಾಗಿಸಲು ನಿರಂತರವಾಗಿ ನಮ್ಮ ಜೊತೆಯಲ್ಲಿ ಸದಾ ಸಾಥ್ ನೀಡಿದ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಘಟಕಗಳು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು.
ಸಮ್ಮೇಳನ ಕಳೆಗಟ್ಟಲು ಸದಸ್ಯರೆಲ್ಲರೂ ಮುಖ್ಯ. ಈ ಸಮ್ಮೇಳನ ಸಲುವಾಗಿ ನಮ್ಮ ಪ್ರೀತಿಯ ಕರೆಗೆ ವಿಶ್ವಾಸವಿಟ್ಟು ಬೀದರಗೆ ಬಂದು ಎರಡೂ ದಿನಗಳು ನಮ್ಮೊಂದಿಗಿದ್ದ ನಿಮಗೆಲ್ಲರಿಗೂ ಧನ್ಯವಾದಗಳು.
ಸಮ್ಮೇಳನದಲ್ಲಿ ಏನಾದರೂ ಲೋಪದೋಷಗಳಾಗಿದ್ದರೆ ಅದರ ಹೊರೆಯನ್ನು ನಾವೇ ಹೊರುತ್ತೇವೆ. ಯಾವುದಾದರೂ ಕಾರಣಕ್ಕಾಗಿ ನೋವಾಗಿದ್ದರೆ, ಬೇಸರವಾಗಿದ್ದರೆ ಕ್ಷಮೆ ಇರಲಿ. ಸವಿನೆನಪುಗಳು ಮಾತ್ರವೇ ನಿಮ್ಮ ಹೃದಯದಲ್ಲಿರಲಿ.
ಮತ್ತೊಮ್ಮೆ ಬೀದರ ಜಿಲ್ಲೆಯವರಿಗೆ ಮತ್ತು ನಿಮಗೂ ಧನ್ಯವಾದಗಳು. ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆಗಳು.
–ಶಿವಾನಂದ ತಗಡೂರು ರಾಜ್ಯಾಧ್ಯಕ್ಷರು, ಕೆಯುಡಬ್ಲ್ಯೂಜೆ.

