ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
‘ಬಹುಜನ ಹಿತಾಯ ಬಹುಜನ ಸುಖಾಯ' ಎಂಬ ಧ್ಯೇಯವಾಕ್ಯದೊಂದಿಗೆ ದೇಶದ ಸಾಂಸ್ಕೃತಿಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಾರ ಭಾರತಿಯ ಚಿತ್ರದುರ್ಗ ಆಕಾಶವಾಣಿ ಕೇಂದ್ರವು ಮೇ 3ರಂದು 35ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಐತಿಹಾಸಿಕ ಸಂದರ್ಭದ ಅಂಗವಾಗಿ ಚಿತ್ರದುರ್ಗ ಆಕಾಶವಾಣಿಯು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
1991ರ ಮೇ 3ರಂದು ಆರಂಭಗೊಂಡ ಚಿತ್ರದುರ್ಗ ಕೇಂದ್ರವು ಕರ್ನಾಟಕದ ಮೊಟ್ಟಮೊದಲ ಎಫ್.ಎಂ. ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 102.6 ಕಂಪನಾಂಕದಲ್ಲಿ ಪ್ರಸಾರವಾಗುವ ಈ ಕೇಂದ್ರವು ಇಂದು ಆಧುನಿಕ ತಂತ್ರಜ್ಞಾನದೊಂದಿಗೆ ನೆಟ್ ವರ್ಕ್ ಲೈವ್ ಸ್ಟ್ರೀಮ್, ನ್ಯೂಸ್ ಆನ್ ಏರ್ ಆಪ್ ಹಾಗೂ ಡಿಟಿಹೆಚ್ ಸೇವೆಗಳ ಮೂಲಕ ವಿಶ್ವವ್ಯಾಪಿ ಜಾಲವನ್ನು ವಿಸ್ತರಿಸಿಕೊಂಡಿದೆ. ಆಧುನಿಕ ಎಸ್‍ಎಂಎಸ್ ಸೌಲಭ್ಯಗಳು, ವ್ಯಾಟ್ಸಾಪ್ ಹಾಗೂ ದೂರವಾಣಿ ಸಂವಹನದೊಂದಿಗೆ ನಿರಂತರ ಶ್ರೋತೃಗಳೊಂದಿಗೆ ನೇರ ಸಂಬಂಧದ ಸಂಪರ್ಕ ಸಾಧಿಸಿದೆ.
ಲೋಕಲ್ ರೇಡಿಯೋ ಸ್ಟೇಷನ್ ಆಗಿರುವ ಚಿತ್ರದುರ್ಗ ಆಕಾಶವಾಣಿ ಆರಂಭದಿಂದ ಇಂದಿನವರೆಗೂ ತನ್ನದೇ ಆದ ವಿಶಿಷ್ಟ ಪ್ರಯತ್ನದ ಮೂಲಕ ಸ್ಥಳೀಯ ಜನರ ಅವಶ್ಯಕತೆ ಪೂರೈಸಲು ಗಂಭೀರ ಪ್ರಯತ್ನ ಮಾಡುತ್ತಿದೆ. ಐತಿಹಾಸಿಕ ಕಲ್ಲಿನ ಕೋಟೆಯ ನಾಡಿನ ಬುಡಕಟ್ಟು ಸಂಸ್ಕøತಿಗೆ ಬೆಳಕು ಚೆಲ್ಲಿ, ಜನಮಾನಸದಲ್ಲಿ ಇಂದಿಗೂ ಮನೆಮಾತಾಗಿದೆ. ಈ ಕೇಂದ್ರವು ಹಲೋ ಡಾಕ್ಟರ್, ವಿವಿಧ ಇಲಾಖೆಯ ಅಧಿಕಾರಿಗಳಿಂದ ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಹಲೋ ಆಕಾಶವಾಣಿ ಜ್ಞಾನ ವಾಹಿನಿ ನೇರ ಫೋನ್ ಇನ್ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರನ್ನು ಪರಿಚಯಿಸುವ ಅರಳಿದ ಹೂಗಳ ಮಾಲಿಕೆ, ಕೃಷಿ ಬೆಳಕು, ಯುವವಾಣಿ ಹಾಗೂ ಚಿಣ್ಣರ ಕಲರವದಂತಹ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರ ಮನ ಗೆದ್ದಿದೆ.
ಚಿತ್ರದುರ್ಗ ಆಕಾಶವಾಣಿಯ 35ನೇ ವರ್ಷಾಚರಣೆಯ ಅಂಗವಾಗಿ ಮೇ 3ರ ಭಾನುವಾರ ಬೆಳಿಗ್ಗೆ 8.30ಕ್ಕೆ ಜಿಲ್ಲೆಯ ಕವಯತ್ರಿಯರಿಂದ ‘ಕಾವ್ಯಧಾರೆ’, 9.05ಕ್ಕೆ ಉದಯೋನ್ಮುಖ ಬರಹಗಾರ್ತಿ ದೀಪಿಕಾ ಮಾರಘಟ್ಟ ಅವರಿಂದ ಆಕಾಶವಾಣಿ ನಮ್ಮೆಲ್ಲರ ವಾಣಿ ಕುರಿತು ವಿಚಾರ ಲಹರಿ ಹಾಗೂ 10 ಗಂಟೆಗೆ ದಾವಣಗೆರೆಯ ಹಸೀನಾ ಬೇಗಂ ಮತ್ತು ಎಸ್.ಸಂಗೀತ ಅವರಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ಪ್ರಸಾರವಾಗಲಿದೆ.
ಬೆಳಿಗ್ಗೆ 11 ಗಂಟೆಗೆ ನಿಲಯದ ವೇದಿಕೆಯಲ್ಲಿ ಯುವವಾಣಿ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಮಧ್ಯಾಹ್ನ 1.20ಕ್ಕೆ ಕೇಳುಗರ ಅಭಿಪ್ರಾಯಗಳನ್ನಾಧರಿಸಿದ ಕಾರ್ಯಕ್ರಮ, ಸಂಜೆ 5.30ಕ್ಕೆ ಕಳೆದ ಸಾಲಿನ ಗುಣಾತ್ಮಕ ಕಾರ್ಯಕ್ರಮಗಳ ಸಿಂಹಾವಲೋಕನ ಹಾಗೂ ಸಂಜೆ 6.50ಕ್ಕೆ ಕೃಷಿರಂಗದಲ್ಲಿ ಜಾಣೆ-ಜಾಣೆಯರ ವಾಣಿಯಲ್ಲಿ ಎಂ.ಶೋಬಾ ಆದ್ರಿಕಟ್ಟೆ, ಪಿ.ಎಂ.ಸುಮಾ ಆನಿವಾಳ, ಸಿ.ಹೇಮಲತಾ ಹಾಗೂ ಎಚ್.ಮಲ್ಲಿಕಾರ್ಜುನ ಆರಾಧ್ಯ ಸೋಮೆನಹಳ್ಳಿ ಅವರು ಭಾಗವಹಿಸಿಲಿದ್ದು, ಚಿತ್ರದುರ್ಗದ ಆಕಾಶವಾಣಿ 35ರ ಸಂಭ್ರಮದ ಮಾತು ಮೂಡಿಬರಲಿವೆ ಎಂದು ಚಿತ್ರದುರ್ಗ ಆಕಾಶವಾಣಿ ನಿಲಯದ ಕಾರ್ಯಕ್ರಮ ಮುಖ್ಯಸ್ಥ ಹನುಮಂತರಾಯಪ್ಪ ತಿಳಿಸಿದ್ದಾರೆ.


