ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಬಾಲ ಭವನ ಸೊಸೈಟಿ, ಬೆಂಗಳೂರು, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ ಇವರ ವತಿಯಿಂದ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಪತ್ರಿಕೆ ಮಾಧ್ಯಮ ಮತ್ತು ಮಕ್ಕಳು ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ನೀಡಿದ ಯುವ ಪತ್ರಕರ್ತ ಎಸ್.ಎಮ್. ಲಿಖಿತ್ ಅವರು ಮಾತನಾಡಿ, ಮಕ್ಕಳು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ದಿನ ಪತ್ರಿಕೆಗಳನ್ನು ಓದುವುದರಿಂದ ಸಾಮಾಜಿಕ ಮತ್ತು ಪ್ರಸ್ತುತ ವಿದ್ಯಮಾನಗಳನ್ನು ತಿಳಿಯಬಹುದಷ್ಟೇ ಅಲ್ಲದೇ ಜ್ಞಾನಾರ್ಜನೆ ಜೊತೆಗೆ ನೆನಪಿನ ಶಕ್ತಿಯು ಸಹ ಉಳಿಯುತ್ತದೆ. ಆಧುನಿಕ ಸಾಮಾಜಿಕ ಜಾಲತಾಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಹಾವಳಿಯಲ್ಲಿ ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪತ್ರಿಕೆ ಒಂದು ದಾಖಲಿಕರಣವಾಗುವುದರಿಂದ ಓದುವುದನ್ನು ರೂಢಿಸಿಕೊಳ್ಳಬೇಕು. ನಾನು ಬಾಲ ಭವನದ ಬೇಸಿಗೆ ಶಿಬಿರದ ಶಿಬಿರಾರ್ಥಿಯಾಗಿ ಈ ಹಿಂದೆ ಬಂದಿದ್ದೇನೆ. ಬಾಲ ಭವನ ಬೇಸಿಗೆ ಶಿಬಿರದಲ್ಲಿ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಲು ಬಹಳ ಉಪಯುಕ್ತವಾಗುತ್ತದೆ. ಆದ್ದರಿಂದ ಮಕ್ಕಳು ಬೇಸಿಗೆ ಶಿಬಿರಗಳ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕ ಡಿ. ಶ್ರೀಕುಮಾರ್ ಮಾತನಾಡಿ, ಮಕ್ಕಳಿಗೆ ಬೆಳೆಯುವ ವಯಸ್ಸಿನಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಕಲಿಸುವ ನಿಟ್ಟಿನಲ್ಲಿ ರಾಜ್ಯ ಬಾಲ ಭವನವು ಮಕ್ಕಳಿಗೆ ಶಿಬಿರವವನ್ನು ಹಮ್ಮಿಕೊಂಡಿದೆ. ಇಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪೂರಕವಾಗಿರುತ್ತವೆ. ರಾಜ್ಯ ಬಾಲ ಭವನ ಸೊಸೈಟಿ ಅಧ್ಯಕ್ಷ ಬಿ.ಆರ್. ನಾಯ್ಡು ಕಾರ್ಯದರ್ಶಿ ನಿಶ್ಚಲ್ ರವರ ಆದೇಶದಂತೆ ಚಿತ್ರದುರ್ಗ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್. ಆಕಾಶ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್. ವಿಜಯಕುಮಾರ್, ನಿರೂಪಣ ಅಧಿಕಾರಿ ಡಿ. ಮಂಜುನಾಥ್ ಇವರುಗಳ ಸಲಹೆ ಸೂಚನೆ ಮಾರ್ಗದರ್ಶನದಂತೆ ಜಿಲ್ಲೆಯಲ್ಲಿ ೧೫ ದಿನಗಳ ಕಾಲ ಮಕ್ಕಳ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಬಾಕಸ್ ಶಿಕ್ಷಕ ತಿಪ್ಪೇರುದ್ರಪ್ಪ, ಕರಾಟೆ ಶಿಕ್ಷಕರಾದ ಶ್ರೀಮತಿ ಚಂದನಾ, ಚಿತ್ರಕಲೆ ಶಿಕ್ಷಕರಾದ ಮಂಜುಳಾ ಹವನೂರು, ನೃತ್ಯ ಶಿಕ್ಷಕರಾದ ಕೆ. ಪವಿತ್ರಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


