ಚಂದ್ರವಳ್ಳಿ ನ್ಯೂಸ್, ದಾವಣಗೆರೆ :
ಕರ್ನಾಟಕ ಕಂಡಂತಹ ಅತ್ಯಂತ ಪುಕ್ಕಲ, ಹೇಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಹರಿಹರದ ವಾಲ್ಮೀಕಿ ಮಠದಲ್ಲಿ ಈ ಕುರಿತು ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರಿನ ಓರ್ವ ಜನಪ್ರತಿನಿಧಿಯಾಗಿ ಮೆಟ್ರೋ ದರ ಯದ್ವಾತದ್ವಾ ಏರಿಕೆ ಮಾಡಿರುವ ಕುರಿತು ಧ್ವನಿ ಎತ್ತಿದ್ದಾರೆ. ತಾಳ್ಮೆ ಪರೀಕ್ಷೆ ಮಾಡುತ್ತಿರುವ ಈ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಆಗಮಿಸಿದ್ದವರನ್ನು ಈ ಸರ್ಕಾರ ಬಂಧಿಸಿದೆ ಎಂದು ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಷ್ಟು ಪುಕ್ಕಲ, ಹೇಡಿ ಎಂದು ಈ ಘಟನೆಯಿಂದ ಗೊತ್ತಾಗಲಿದೆ. ಒಂದು ವರ್ಷದಲ್ಲಿ ಎರಡು ಬಾರಿ ಮೆಟ್ರೋ ದರ ಏರಿಕೆ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಮೆಟ್ರೋಗೆ ದರ ಏರಿಕೆ:
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ತಾಳ್ಮೆಯ ಕಟ್ಟೆ ಒಡೆದಿದೆ. ಅದನ್ನು ತಡೆಯಲು ಆಗೋದಿಲ್ಲ ಎಂದು ತೇಜಸ್ವಿ ಸೂರ್ಯ ಹೋರಾಟ ಮಾಡ್ತಿದ್ದಾರೆ. ಹೋರಾಟ ಮಾಡಿ ದರ ಏರಿಕೆ ತಡೆ ಹಿಡಿದಿದ್ದಾರೆ. ಮೆಟ್ರೋ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುದಾನ ಬರ್ತಾ ಇದೆ. ಆದರೆ, ರಾಜ್ಯ ಸರ್ಕಾರ ಬಜೆಟ್ನಲ್ಲಿ ಮೆಟ್ರೋಗೆ ಅನುದಾನ ನೀಡದೇ ದರ ಏರಿಕೆ ಮಾಡಿದ್ದಾರೆ. ಇದರ ವಿರುದ್ದ ಸಂಸದ ತೇಜಸ್ವಿ ಸೂರ್ಯ ಹೋರಾಟ ಮಾಡಿ ನ್ಯಾಯ ಕೊಡಿಸಿದ್ದಾರೆ ಎಂದು ಸಿಂಹ ಅವರು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಖಾಲಿ ಟ್ರಂಕ್ ಹಿಡಿದು ತೇಜಸ್ವಿ ಸೂರ್ಯ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದಾರೆ. ಅಂತಹವರನ್ನು ಬಂಧನ ಮಾಡುವ ಕೆಲಸವನ್ನು ಈ ಸರ್ಕಾರ ಮಾಡಿದೆ. ಅವರ ವೈಫಲ್ಯವನ್ನು ಎತ್ತಿ ತೋರಿಸಿದವರನ್ನು ಯಾವ ರೀತಿ ಹತ್ತಿಕ್ಕುತ್ತಾರೆ ಎನ್ನುವುದಕ್ಕೆ ಇದೇ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ವ್ಯವಸ್ಥೆಯ ಗಂಧ – ಗಾಳಿ ಗೊತ್ತಿಲ್ಲದ ಸಿಎಂ:
ಸಮಸ್ತ ಬೆಂಗಳೂರಿಗರ ಪರವಾಗಿ ತೇಜಸ್ವಿ ಸೂರ್ಯ ಹೋರಾಟ ಮಾಡಿದ್ದು. ಸಿದ್ದರಾಮಯ್ಯನವರು 17 ಬಜೆಟ್ ಮಂಡನೆ ಮಾಡಿ ವಿಶ್ವ ಪ್ರಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಖಜಾನೆ ಖಾಲಿಯಾಗಿ ಅಭಿವೃದ್ಧಿ ಕೆಲಸಕ್ಕೆ ಹಣ ಕೊಡದ ಪರಿಸ್ಥಿತಿ ಇದೆ. ಬರೀ ಸಭೆ ಸಮಾರಂಭಗಳಲ್ಲಿ ಏಕವಚನದಲ್ಲಿ ಉಡಾಫೆಯಾಗಿ ಮಾತನಾಡುವುದು ಬಿಟ್ಟರೆ ಅವರಿಗೆ ಏನೂ ಗೊತ್ತಿಲ್ಲ ಎಂದು ಟೀಕಾಪ್ರಹಾರ ಮಾಡಿದರು.
17 ಬಜೆಟ್ ಮಂಡನೆ ಮಾಡಿದ ನಿಮಗೆ ಆರ್ಥಿಕ ವ್ಯವಸ್ಥೆಯ ಗಂಧ – ಗಾಳಿ ಗೊತ್ತಿಲ್ಲ. ಒಬ್ಬ ಯುವ ಸಂಸದ ನಿಮ್ಮನ್ನು ಪ್ರಶ್ನೆ ಮಾಡಿದ್ರೆ ಅರೆಸ್ಟ್ ಮಾಡಿಸುತ್ತೀರಿ. ಇದರಿಂದನೀವು ಎಷ್ಟು ಪುಕ್ಕುಲ, ಹೇಡಿ ಮುಖ್ಯಮಂತ್ರಿ ಆಗಿರಬಹುದು ಎಂದು ಪ್ರಶ್ನಿಸಿ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

