ಚಂದ್ರವಳ್ಳಿ ನ್ಯೂಸ್, ತುಮಕೂರು:
ರೈತ ಮಕ್ಕಳಿಗೆ, ಯುವಕರಿಗೆ ಮದುವೆ ಆಗಲು ಹುಡುಗಿಯರು ಸಿಗುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರೈತರು, ಹಳ್ಳಿಯಲ್ಲಿ ಇರುವವರು ಎಂದರಂತೂ ಹೆಣ್ಣು ಕೊಡಲು ಮುಂದೆ ಬರುವವರೇ ಇಲ್ಲ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಹೆಚ್. ಡಿ. ರಂಗನಾಥ್ ಅವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ವಿಶೇಷ ಭತ್ಯೆ ನೀಡುವಂತೆ ಕೋರಿರುವ ಪತ್ರ ಭಾರಿ ವೈರಲ್ ಆಗಿದೆ.
ಪತ್ರದಲ್ಲೇನಿದೆ?:
ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಭಿನ್ನ ವಿಶಿಷ್ಟ ಎನ್ನಬಹುದಾದ ಪತ್ರ ಬರೆದು ಗಮನ ಸೆಳೆದಿದ್ದಾರೆ. ಕೃಷಿಯಲ್ಲಿ ತೊಡಗಿರುವ ತಾಲೂಕಿನ ಗಂಡು ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ ಹಾಗೂ ಸ್ಥಾನಮಾನ ಘೋಷಿಸುವಂತೆ ಅವರು ಆಗ್ರಹಿಸಿದ್ದಾರೆ.
ನನ್ನ ಮತ ಕ್ಷೇತ್ರ ಕುಣಿಗಲ್ ತಾಲ್ಲೂಕು ಗ್ರಾಮೀಣ ಪ್ರದೇಶವಾಗಿದ್ದು, ವ್ಯವಸಾಯ ಅವಲಂಭನೆ ಹೆಚ್ಚಿದೆ. ಹೀಗಾಗಿ ಗ್ರಾಮಗಳಲ್ಲಿ ಹೆಚ್ಚಿನ ಯುವಕರು ವಾಸವಿದ್ದು, ಅವರು ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಇವರನ್ನು ಮದುವೆ ಆಗಲು ಹೆಣ್ಣು ಮಕ್ಕಳು ನಿರಾಕರಿಸುತ್ತಿದ್ದು, ಮೂವತ್ತು ವರ್ಷ ದಾಟಿದರೂ ಅವರ ವಿವಾಹ ನಡೆಯುತ್ತಿಲ್ಲ.
ಹೀಗಾಗಿ ಅವರು ತೊಂದರೆಗೆ ಸಿಲುಕಿದ್ದು, ವ್ಯವಸಾಯ ಮಾಡಿಕೊಂಡಿರುವವರನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ, ವಿಶೇಷ ಸ್ಥಾನಮಾನ ಘೋಷಿಸಬೇಕೆಂದು ಶಾಸಕರು ಆಗ್ರಹಿಸಿದ್ದಾರೆ.
ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ 10 ಲಕ್ಷ ಠೇವಣಿ ಇಡುವ ಯೋಜನೆಯನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದ್ದರು.
ಹುಡುಗಿಯರು ಹೆಚ್ಚಾಗಿ ಸರ್ಕಾರಿ ನೌಕರರು, ಸಿಟಿಗಳಲ್ಲಿರುವ ಗಂಡು ಮಕ್ಕಳೇ ಬೇಕು ಎನ್ನುತ್ತಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿ ರೈತರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರ ಮಕ್ಕಳನ್ನು ಮದುವೆ ಆಗಲು ಯಾರೂ ಒಪ್ಪದ ಕಾರಣ ಸರ್ಕಾರ ಹೊಸ ಯೋಜನೆ ಜಾರಿಗೆ ತರಬೇಕು ಎಂದು ಶಾಸಕರು ಆಗ್ರಹಿಸಿದ್ದರು.

