ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಲ್ಲಿನ ನೆಹರು ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಕ್ಷಯ ರೋಗಿಗಳಿಗಾಗಿ ವಿಶೇಷ “ಡಿಫರೆನ್ಷಿಯಲ್ ಹೆಲ್ತ್ ಚೆಕ್ ಅಪ್‘ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು.
ರೋಗಿಗಳನ್ನು ತಪಾಸಣೆ ಮಾಡಿದ ವೈದ್ಯಾಧಿಕಾರಿ ಡಾ. ಸೈಯದ್ ಬಿಲಾಲ್ ಮಾತನಾಡಿ, “ಕ್ಷಯ ರೋಗಿಗಳು ಚಿಕಿತ್ಸಾ ಅವಧಿಯಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ತಪಾಸಣೆಯ ನಂತರ ನೀಡಲಾಗುವ ಔಷಧೋಪಚಾರದ ಹಂತಗಳಾದ ಐಪಿ ಹಂತ ಮತ್ತು ಸಿಪಿ ಹಂತಗಳ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ರೋಗಿಗಳು ಅರ್ಧಕ್ಕೆ ಚಿಕಿತ್ಸೆ ನಿಲ್ಲಿಸಬಾರದು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕ್ಷಯರೋಗ ಘಟಕದ ಮೇಲ್ವಿಚಾರಕ ಎಸ್‍ಟಿಎಲ್‍ಎಸ್ ನಾಗರಾಜ್ ಮತ್ತು ಆರೋಗ್ಯ ಸಂದರ್ಶಕ ಅಧಿಕಾರಿ ಸಂತೋಷ್ ಮಾತನಾಡಿ, ಕ್ಷಯ ರೋಗದಿಂದ ಶೀಘ್ರವಾಗಿ ಗುಣಮುಖರಾಗಲು ಪೌಷ್ಠಿಕ ಆಹಾರದ ಸೇವನೆ ಹಾಗೂ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳುವುದು ಅತಿ ಮುಖ್ಯ ಎಂದು ರೋಗಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ಹನುಮಂತಪ್ಪ, ರೇಖಾ, ಲ್ಯಾಬ್ ತಾಂತ್ರಿಕ ಅಧಿಕಾರಿ ಪೂರ್ಣಿಮಾ, ಸ್ಟಾಫ್ ನರ್ಸ್ ಮನು, ಫಾರ್ಮಸಿ ಅಧಿಕಾರಿ ಅಸಿಯಾ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಇದ್ದರು.

