ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೈಗಾರಿಕಾ ರಾಸಾಯನಿಕ ತ್ಯಾಜ್ಯ ಹಾಗೂ ನಗರ ಸಭೆಯ ಕೊಳಚೆ ನೀರು ಅಧಿಕಾರಿ ವರ್ಗದವರು ರಾಜಕೀಯ ವರ್ಗದವರು ಸಂವಿಧಾನಕ್ಕೆ ವಿರುದ್ಧವಾಗಿ ಕೆರೆಗಳಿಗೆ ಹರಿಸುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಜನವರಿ 26 ರಂದು ಎರಡು ಪಂಚಾಯತಿಯ ವ್ಯಾಪ್ತಿಯ ಮನೆಗಳ ಮೇಲೆ ಕಪ್ಪು ಬಾವುಟವನ್ನು ಹಾರಿಸಲು ನಿರ್ಧರಿಸಲಾಗಿದೆ ಎಂದು ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿ ಮುಖ್ಯಸ್ಥ ಸತೀಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಕೈಗಾರಿಕಾ ರಾಸಾಯನಿಕ ತ್ಯಾಜ್ಯ ನೀರನ್ನು ನಮ್ಮ ಕೆರೆಗಳಿಗೆ ಬಿಡುತ್ತಿದ್ದಾರೆ. ಇಲ್ಲಿವರೆಗೂ ಸುಮಾರು 28 ಕ್ಕೂ ಹೆಚ್ಚು ಕಾರ್ಖಾನೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ನೀರು ಬಿಡುತ್ತಿರುವುದನ್ನು ಫೋಟೋ ಮತ್ತು ವಿಡಿಯೋ ಸಮೇತ ಅಧಿಕಾರಿಗಳಿಗೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು.
ಮಜರಾ ಹೊಸಹಳ್ಳಿ ಮತ್ತು ದೊಡ್ಡ ತುಮಕೂರು ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ಲಭ್ಯವಾಗುತ್ತಿರುವ ನೀರು ಮನುಷ್ಯ ಆರೋಗ್ಯಕ್ಕೆ ಹೆಚ್ಚು ಹಾನಿ ಮಾಡುವ ಹೆವಿ ಮೆಟಲ್ಸ್ (ಭಾರಿ ಲೋಹಗಳು) ನೂರಾರು ಪಟ್ಟು ಹೆಚ್ಚು ಕಂಡು ಬಂದಿರುತ್ತದೆ. ಕಾರ್ಖಾನೆಗಳಿಂದ ನೀರು ಹೊರಗೆ ಬಿಡಬಾರದು ಎಂಬ ಕಾನೂನು ಇದ್ದರೂ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಒಂದು ನೋಟಿಸ್ ಕೊಟ್ಟು ಸುಮ್ಮನೆ ಆಗುತ್ತಾರೆ. ಇನ್ನು ದೊಡ್ಡಬಳ್ಳಾಪುರ
ನಗರಸಭೆ ಹಾಗೂ ಬಾಶೇಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಳಚೆ ನೀರು, ಕೈಗಾರಿಕಾ ರಾಸಾಯನಿಕ ನೀರು ನೇರವಾಗಿ ಕೆರೆಗಳಿಗೆ ಬಿಡುತ್ತಿದ್ದಾರೆ ಎಂದು ಆರೋಪಿಸಿದರು.
ಬೇಡಿಕೆಗಳು-
ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರ ಕ್ಕೆ ವರ್ಗಾಯಿಸಬೇಕು.
- ದೊಡ್ಡಬಳ್ಳಾಪುರದ ಕೋಳೆಚೆ ನೀರಿಗೆ ವೈಜ್ಞಾನಿಕ ಶುದ್ಧೀಕರಣ ಘಟಕ ಸ್ಥಾಪಿಸಬೇಕು.
- ಕಾಡನೂರು ಪಂಚಾಯಿತಿಯಿಂದ ಅತಿ ಜರೂರಾಗಿ ಕೊಳವೆಬಾವಿ ಕೊರೆಸಿ ಎರಡು ಪಂಚಾಯಿತಿಗೆ ನೀರು ಕೊಡಬೇಕು.
4.ರಾಸಾಯನಿಕ ನೀರು ಬಿಡುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅರ್ಕಾವತಿ ನದಿಯ ಉಳಿವಿಗಾಗಿ ಜೀವ ಸಂಕುಲದ ರಕ್ಷಣೆಗಾಗಿ ಹೋರಾಟ ಮಾಡಲೇ ಬೇಕಾದ ಅನಿವಾರ್ಯವಾಗಿದೆ.
ಕೆರೆಗಳಿಗೆ ಹರಿಸುತ್ತಿರುವ ಕೊಳಚೆ ನೀರು ಕೈಗಾರಿಕಾ ರಾಸಾಯನಿಕ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಜನವರಿ 26 ರಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಪ್ಪು ಬಾವುಟವನ್ನು ಎರಡು ಪಂಚಾಯತಿಯ ಪ್ರತಿ ಮನೆಯ ಮೇಲೆ ಹಾರಿಸಲು ನಿರ್ಧರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿಯ ಮುಖಂಡ ಕಾಳೇಗೌಡ, ಸದಸ್ಯರಾದ ವಿಜಯಕುಮಾರ್, ಮುನಿಕೃಷ್ಣಪ್ಪ ಮತ್ತಿತರರು ಇದ್ದರು.
“ಎಲ್ಲದಕ್ಕೂ ಕಡಿವಾಣ ಹಾಕಬೇಕೆಂದು ಕಾನೂನಿನಾತ್ಮಕವಾಗಿ ಅನೇಕ ಹೋರಾಟಗಳು ನಡೆಸಿದ್ದರು ಯಾವುದೇ ಪ್ರಯೋಜನ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳು ಹೋರಾಟದ ಸಮಯದಲ್ಲಿ ಬರುತ್ತಾರೆ, ನಾಲ್ಕು ತಿಂಗಳಲ್ಲಿ ಎಸ್ ಟಿ ಪಿ ಘಟಕ ಕೆಲಸ ಶುರು ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ, ಆರು ತಿಂಗಳು ಕಳೆದರೂ ಯಾವುದೇ ಒಂದು ಪೈಸೆ ಅಷ್ಟು ಕೆಲಸ ಪ್ರಾರಂಭವಾಗುವುದಿಲ್ಲ. ಇನ್ನು ಬಳಸುವ ನೀರನ್ನು ಕಾಡನೂರು ಪಂಚಾಯಿತಿಯಿಂದ ಕೊಳವೆಬಾವಿ ಕೊರೆಸಿ ನೀರು ಕೊಡುತ್ತೇವೆ ಎಂದು ಹೇಳಿದ್ದಾರೆ ಆದರೆ ಇಲ್ಲಿವರೆಗೂ ಯಾವುದೇ ಕೆಲಸ ಪ್ರಾರಂಭವಾಗಿಲ್ಲ”. ವಸಂತಕುಮಾರ್, ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿ ಸದಸ್ಯ.