ಚಂದ್ರವಳ್ಳಿ ನ್ಯೂಸ್, ಬೆಂಗಳೂರು ಗ್ರಾಮಾಂತರ:
ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಕ್ಲಾಸ್ ರೂಂನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ್ದ ವಿಡಿಯೋವೊಂದು ವೈರಲ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ ಬೇಗೂರು ಸಮೀಪದ ಕಾಲೇಜಿನಲ್ಲಿ ಜರುಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದೃಶ್ಯದಲ್ಲಿ ಏನಿದೆ?: ಪ್ರಾಧ್ಯಾಪಕ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿ ಬ್ಯಾಚ್ಗೆ ಚಾಕಲೇಟ್ ಹಂಚುತ್ತಿರುವುದಾಗಿ ಹೇಳಿದ್ದು ವಿಡಿಯೋದಲ್ಲಿ ಕಂಡುಬಂದಿದೆ.
ಬಳಿಕ ಪ್ರಾಧ್ಯಾಪಕ ತೆರಳುತ್ತಿದ್ದ ವೇಳೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿ ಪ್ರಾಂಶುಪಾಲರ ಬಳಿ ಬ್ಯಾಚ್ ಸಮೇತ ತೆರಳುವುದಾಗಿ ಹೇಳಿದ್ದಾರೆ.
ಆ ವೇಳೆ ‘ನೀನು ಏಕೆ ಈ ಹಿಂದೆ ಪ್ರಪೋಸ್ ಮಾಡಿದ್ದೆ‘ ಎಂದು ಪ್ರಾಧ್ಯಾಪಕ ಹೇಳಿರುವುದು ವಿಡಿಯೋದಲ್ಲಿದೆ. ಇದನ್ನು ವಿದ್ಯಾರ್ಥಿನಿ ನಿರಾಕರಿಸಿದಾಗ, ಸಿಸಿಟಿವಿ ದೃಶ್ಯ ಇರುವುದಾಗಿ ಪ್ರಾಧ್ಯಾಪಕ ಹೇಳಿದ್ದಾರೆ.
ಬಳಿಕ ಸಿಸಿಟಿವಿ ದೃಶ್ಯ ತೋರಿಸುವುಂತೆ ವಿದ್ಯಾರ್ಥಿನಿ ಹೇಳಿದಾಗ ನಾನು ನಾಳೆ ಮಾತನಾಡುವುದಾಗಿ ಪ್ರಾಧ್ಯಾಪಕ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಬ್ಯಾಚ್ನ ಎಲ್ಲ ವಿದ್ಯಾರ್ಥಿಗಳಿಗೆ ಚಾಕಲೇಟ್ ತೆಗೆದುಕೊಳ್ಳುವಂತೆ ಹೇಳಿ ಪ್ರಾಧ್ಯಾಪಕ ನಿರ್ಗಮಿಸಿದ್ದು ವಿಡಿಯೋದಲ್ಲಿದೆ.
ಪ್ರಾಧ್ಯಾಪಕರ ಮೇಲೆ ಹಲ್ಲೆ: ಇದಾದ ಬಳಿಕ ತರಗತಿಯಿಂದ ಹೊರ ಬಂದ ನಂತರ ಆಕ್ರೋಶಗೊಂಡ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಅವರ ಸಹಪಾಠಿಗಳು ಪ್ರಾಧ್ಯಾಪಕನನ್ನು ಸುತ್ತುವರೆದು ಪ್ರಶ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಮತ್ತು ಇತರ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಯಿಂದ ತಪ್ಪಿಸಿಕೊಂಡ ಲೆಕ್ಚರರ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು: ಈ ಘಟನೆಗೆ ಸಂಬಂಧ ಪಟ್ಟಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಘಟನೆಯು ವಿದ್ಯಾರ್ಥಿಗಳ ಭದ್ರತೆ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಕಾಲೇಜುಗಳಲ್ಲಿ ಶಿಸ್ತು ಮತ್ತು ಸುರಕ್ಷತೆ ಎಷ್ಟರ ಮಟ್ಟಿಗೆ ಕಾಪಾಡಲಾಗುತ್ತಿದೆ ಎಂಬ ಪ್ರಶ್ನೆಗಳು ಉದ್ಭವವಾಗುವಂತೆ ಮಾಡಿದೆ.
ಯಾವಾಗ ಘಟನೆ ನಡೆದಿದ್ದು?: ಮಾರ್ಚ್ 25 ರಂದು ಟಿ. ಬೇಗೂರಿನ ಸಂಸ್ಥೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ರೆಕಾರ್ಡ್ ಮಾಡಿದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ತನಿಖೆ ಬಳಿಕ ಕಾಲೇಜಿನಲ್ಲಿ ಏನೆಲ್ಲ ನಡೆಯಿತು ಎಂಬುದು ಗೊತ್ತಾಗಲಿದೆ. ಈ ಬಗ್ಗೆ ಪೊಲೀಸರಿಂದ ಅಧಿಕೃತವಾದ ಹೇಳಿಕೆ ಹೊರ ಬಂದಿಲ್ಲ. ಅವರಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

