ಜಾತಿ ಗಣತಿ ಸಂಪಾದಕೀಯ….
ಜನ ಗಣತಿ ಜೊತೆಯಲ್ಲೇ ಜಾತಿ ಗಣತಿ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿರುವುದು ಅತ್ಯಂತ ಸ್ವಾಗತಾರ್ಹ. ಹಾಗೆ ಈ ಜಾತಿ ಗಣತಿ ರಾಜಕೀಯ ಅಸ್ತ್ರವಾಗಿ ಮಾರ್ಪಡದೆ, ಕರ್ನಾಟಕ ರಾಜ್ಯ ಸೇರಿದಂತೆ ಇಡೀ ರಾಷ್ಟ್ರದಲ್ಲಿ ಯಾವ ಸಮುದಾಯಗಳಿಗೆ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿಲ್ಲವೋ ಅಂತಹ ಎಲ್ಲ ಜಾತಿ, ಜನಾಂಗ, ಸಮುದಾಯಗಳಿಗೆ ಯಾವುದೇ ಶಿಫಾರಸ್ಸು ಇಲ್ಲದೆ ಕೇಂದ್ರದ ಎಸ್ಸಿ, ಎಸ್ಟಿ, ಒಬಿಸಿ ಮೀಸಲು ಸೌಲಭ್ಯ ದೊರೆಯಲು ಮೋದಿ ಅವರ ಜಾತಿ ಗಣತಿ ವರದಿ ಅಸ್ತ್ರ ಆಗಲಿ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯದಂತೆ 2015ರಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಿಂತ ಜಾತಿ ಸಮೀಕ್ಷೆಯೆಂದೇ ದೊಡ್ಡ ಸದ್ದು ಮಾಡುತ್ತಾ ಸಮೀಕ್ಷೆಯ ದಿಕ್ಕೆ ಬದಲಾದಂತೆ ಕಂಡಿತು. ಸಿದ್ದರಾಮಯ್ಯನವರೇ ಹೇಳಿ ಬರೆಸಿದ ಸಮೀಕ್ಷೆ, ವೈಜ್ಞಾನಿಕವಾಗಿಲ್ಲ, 10 ವರ್ಷಗಳ ಹಳೆಯ ಸಮೀಕ್ಷೆ, ನಮ್ಮ ಮನೆಗೆ ಬಂದಿಲ್ಲ, ತಾರತಮ್ಯ ಮಾಡಲಾಗಿದೆ, ಈ ಸಮೀಕ್ಷೆ ಒಪ್ಪಲು ಸಾಧ್ಯವಿಲ್ಲ, ಒಕ್ಕಲಿಗ, ಲಿಂಗಾಯಿತ ಸೇರಿದಂತೆ ಅನೇಕ ಜಾತಿಗಳಿಗೆ ಅನ್ಯಾಯವಾಗಿದೆ ಎನ್ನುವ ವಿರೋಧಗಳು ವ್ಯಾಪಕವಾಗಿ ಕೇಳಿ ಬಂದವು.
ಈ ಆರೋಪಗಳ ಜೊತೆಯಲ್ಲೇ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ಪ್ರವರ್ಗ-2ಎನಲ್ಲಿ ಅತಿ ಹೆಚ್ಚು ಯಾರಿಗೆ ಅನುಕೂಲವಾಗಿದೆ ಎನ್ನುವುದರ ಅಂಕಿ ಅಂಶಗಳನ್ನು ಪ್ರಕಟಿಸಬೇಕು ಎಂದು ಆಗ್ರಹ ಮಾಡಿರುವುದರಲ್ಲಿ ಅರ್ಥವಿದೆ.
ಇಂದಿನ ಮೀಸಲಾತಿ ಸೌಲಭ್ಯ ಎನ್ನುವುದು ರಾಜಕೀಯ ಅಸ್ತ್ರವಾಗುತ್ತಿದೆ. ಬಾಯಿದ್ದವರು ಬದುಕುತ್ತಾರೆ ಎನ್ನುವಂತೆ ರಾಜಕೀಯ ಪ್ರಭಾವ, ಶಿಫಾರಸ್ಸು ಇದ್ದ ಜಾತಿ, ಜನಾಂಗ, ಸಮುದಾಯಗಳಿಗೆ ಹೆಚ್ಚಿನ ಮೀಸಲಾತಿ ಸೌಲಭ್ಯ ದೊರೆತಿರುವುದು ಮತ್ತು ದೊರೆಯುತ್ತಿರುವುದು ಹೊಸದೇನಲ್ಲ.
ಒಂದು ಪಕ್ಷದ ಆಶೀರ್ವಾದ ಒಂದು ಜಾತಿ, ಜನಾಂಗ, ಸಮುದಾಯಕ್ಕಿದ್ದರೆ ಯಾವುದೇ ಕುಲ ಶಾಸ್ತ್ರೀಯ ಅಧ್ಯಯನ ವರದಿ ಇಲ್ಲದೆ, ರಾಜಕೀಯ ಶಿಫಾರಸ್ಸಿನೊಂದಿಗೆ ತನ್ನ ಪಾದದ ಕೆಳಗೆ ಮೀಸಲಾತಿ ಸೌಲಭ್ಯ ಪಡೆದಿರುವ ಜಾತಿಗಳು ಸಹ ಇವೆ. ಅದೇ ರೀತಿ ರಾಜಕೀಯ ಪ್ರಭಾವ ಅಥವಾ ಶಿಫಾರಸ್ಸು ಇಲ್ಲದ ಜಾತಿ, ಜನಾಂಗಗಳು ಎಷ್ಟೇ ಹಿಂದುಳಿದಿದ್ದರೂ ಯಾವುದೇ ಮೀಸಲಾತಿ ಸಿಕ್ಕಿಲ್ಲದ ನಿದರ್ಶನ ಕೂಡ ಇದೆ.
ಎನ್ ಡಿಎ ಮೈತ್ರಿ ಕೂಟದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತು ಅವರ ಸಂಪುಟ ಸಭೆ ಜನಗಣತಿಯೊಂದಿಗೆ ಜಾತಿಗಣತಿ ಮಾಡಲು ಒಪ್ಪಿಗೆ ನೀಡಿದ್ದು ಒಂದು ಕ್ರಾಂತಿಕಾರ ತೀರ್ಮಾನ. ರಾಜ್ಯದಲ್ಲಿ ನಡೆದ ಜಾತಿ ಗಣತಿಯಲ್ಲಿ ಆಗಿರುವ ಲೋಪದೋಷಗಳಂತೆ ಕೇಂದ್ರದ ಜಾತಿ ಗಣತಿಯಲ್ಲಿ ಲೋಪದೋಷಗಳಾಗಲಿ, ತಾರತಮ್ಯದಿಂದ ಕೂಡದ ಸಮೀಕ್ಷೆಯಾಗಲಿ ಆಗಬಾರದು.
ಅವಕಾಶ ವಂಚಿತ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲು ನೈಜ ಬದ್ಧತೆ ತೋರಿರುವ ಪ್ರಧಾನಿಗಳು 95 ವರ್ಷಗಳ ನಂತರ ದೇಶದಲ್ಲಿ ಮತ್ತೆ ಜಾತಿ ಗಣತಿಗೆ ಮುಂದಾಗಿದ್ದಾರೆ. ಈ ಹಿಂದೆ ಬ್ರಿಟಿಷರ ಆಳ್ವಿಕೆಯಲ್ಲಿ ಅಂದರೆ 1881 ರಿಂದ 1931ರವರೆಗೆ 10 ವರ್ಷಗಳಿಗೊಮ್ಮೆ ಜನಗಣತಿ ಜೊತೆ ಎಲ್ಲ ಜಾತಿಗಳ ಗಣತಿ ಮಾಡಲಾಗುತ್ತಿತ್ತು. 1931ರ ಜಾತಿ ಗಣತಿಯೇ ಕೊನೆ ಅಲ್ಲಿಂದ ಜಾತಿ ಗಣತಿ ಮಾಡಿಲ್ಲ. ಆ ನಂತರದ ದಿನಗಳಲ್ಲಿ ಜಾತಿ ಗಣತಿ ಮಾಡಿರಲಿಲ್ಲ. ಜೊತೆಗೆ ಸೂಕ್ತ ಮೀಸಲಾತಿಗೆ ನ್ಯಾಯ ಕೋರಿ ನ್ಯಾಯಾಲಯಗಳ ಕದ ತಟ್ಟಿದ್ದ ಹಲವು ಜಾತಿ, ಜನಾಂಗಗಳಿಗೆ ಸಮಗ್ರವಾದ ಜಾತಿ ದತ್ತಾಂಶ ಇಲ್ಲದೆ ತೀರ್ಪು ನೀಡಿರಲಿಲ್ಲ. ಇದರಿಂದ ಸಾಕಷ್ಟು ಜಾತಿಗಳಿಗೆ ಮೀಸಲಾತಿ ಪಡೆಯಲು ಹಿನ್ನಡೆಯಾಗಿತ್ತು.
ಜಾತಿ ಗಣತಿ ಹೀಗಿರಲಿ…
ಕೇಂದ್ರ ಸರ್ಕಾರ ಯಾವುದೇ ಪ್ರಭಾವ ಅಥವಾ ಶಿಫಾರಸ್ಸಿಗೆ ಒಳಗಾಗದೇ ಕಡ್ಡಾಯವಾಗಿ ವೈಜ್ಞಾನಿಕ ರೀತಿಯಲ್ಲಿ ಜಾತಿ ಗಣತಿ ಮಾಡಬೇಕು. ದೇಶದಲ್ಲಿನ ಪ್ರತಿ ಪ್ರಜೆಯ ಆಸ್ತಿ, ಉದ್ಯೋಗ, ಕುಟುಂಬದ ಸ್ಥಿತಿಗತಿ, ಶಿಕ್ಷಣ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿಯಲು ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್, ಪಾನ್ ಕಾರ್ಡ್ ಲಿಂಕ್, ಇ-ಕೆವೈಸಿಯೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಮಾಡಿಕೊಂಡು ಜಾತಿ ಗಣತಿ ಮಾಡಬೇಕು.
ಆಧಾರ್, ಪಾನ್, ಬ್ಯಾಂಕ್ ಖಾತೆ ಲಿಂಕ್ ಮಾಡುವುದರಿಂದ ಅತಿಮುಖ್ಯವಾಗಿ ಡೂಪ್ಲಿಕೇಷನ್ ಆಗುವುದು ತಪ್ಪಲಿದೆ. ನಿಖರ ಜಾತಿ ಜನಸಂಖ್ಯೆ ತಿಳಿಯಲಿದೆ. ಆ ವ್ಯಕ್ತಿ, ಕುಟುಂಬದ ಜಾತಿ, ಹೊಂದಿರುವ ವರಮಾನ, ಉದ್ಯೋಗ ಮತ್ತಿತರ ಮಾಹಿತಿಗಳು ಕೈ ಬೆರಳ ತುದಿಯಲ್ಲಿ ಲಭ್ಯವಾಗಲಿವೆ. ಆಗ ಉದ್ಯೋಗ, ವರಮಾನ, ಭೂಮಿ, ಕಟ್ಟಡ ಸೇರಿ ಇತರೆ ಆಸ್ತಿ ಯಾವುದೂ ಸುಳ್ಳು ಹೇಳಲು ಬರುವುದಿಲ್ಲ. ವೈಜ್ಞಾನಿಕವಾದ ವರದಿಯಿಂದ ಶೋಷಿತ, ಅವಕಾಶ ವಂಚಿತ ಜಾತಿ, ಜನಾಂಗಗಳಿಗೆ ಸೂಕ್ತ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ನೀಡಲು ಸಾಧ್ಯವಾಗಲಿದೆ. ಹಾಗಾಗಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ನೊಂದಿಗೆ ಜಾತಿ ಗಣತಿ ಆರಂಭ ಮಾಡಬೇಕಾಗಿದೆ.
ಹೀಗೆ ವೈಜ್ಞಾನಿಕ ಜಾತಿ ಗಣತಿ ಮಾಡುವುದರಿಂದ ಸಾಮಾಜಿಕ ನ್ಯಾಯದ ಪರ ಬದ್ಧತೆ ತೋರಿದಂತಾಗಲಿದೆ. ಸಮಾಜದ ಶೋಷಿತರು, ಹಿಂದುಳಿದವರು, ಅತಿ ಹಿಂದುಳಿದವರ ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿಕ ಸ್ಥಿತಿಗತಿಗಳನ್ನು ಅರಿಯಲು ಅನುಕೂಲವಾಗಲಿದೆ.
ಇಲ್ಲಿಯ ತನಕ ಜಾತಿ ಗಣತಿ ಎಂದರೆ ಮತ ಬೇಟೆಗಾಗಿ ಜಾತಿ -ಜಾತಿಗಳನ್ನು ಎತ್ತಿ ಕಟ್ಟುವುದು, ಮತೀಯ ಶಕ್ತಿಗಳನ್ನು ಓಲೈಸುವುದು, ಗೊಂದಲ ಸೃಷ್ಟಿಸುವುದು, ಅವೈಜ್ಞಾನಿಕ ಅಂಶಗಳಿಗೆ ಒತ್ತು ನೀಡಿ ವಾಸ್ತವಕ್ಕೆ ದೂರವಾದ ವರದಿ ನೀಡಿ ರಾಜಕೀಯ ಮಾಡಲಾಗುತ್ತಿತ್ತು. ಆಧಾರ್ ಲಿಂಕ್ ಮಾಡಿ ಜಾತಿ ಗಣತಿ ಮಾಡಿದರೆ ಅದಕ್ಕೆ ಕಡಿವಾಣ ಬೀಳಲಿದೆ.
ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಸಿದ್ಧಾಂತ ಹಾಗೂ ಸಂವಿಧಾನದ ಆಶಯಗಳಿಗೆ ಆದ್ಯತೆ ನೀಡಿ ವೈಜ್ಞಾನಿಕವಾಗಿ ಜಾತಿಗಣತಿ ಮಾಡಬೇಕಾಗಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ವೈಜ್ಞಾನಿಕವಾದ ಜಾತಿ ಗಣತಿಯೊಂದಿಗೆ ಎಸ್ಸಿ, ಎಸ್ಟಿ, ಒಬಿಸಿಗಳಲ್ಲೂ ಒಳ ಮೀಸಲಾತಿ ಜಾರಿಗೆ ಒತ್ತು ನೀಡಬೇಕಾಗಿದೆ. ಪರಿಶಿಷ್ಟ ಜಾತಿ(ಎಸ್ಸಿ) ವರ್ಗವನ್ನು ಎರಡು ಭಾಗ ಮಾಡಬೇಕಾಗಿದೆ. ಸಾಮಾಜಿಕವಾಗಿ ಅತಿ ಹೆಚ್ಚು ಶೋಷಣೆಗೆ ಒಳಗಾಗಿರುವ ದೇಶದ ಅಸ್ಪೃಶ್ಯ ಜಾತಿಗಳನ್ನು ಒಂದು ಗುಂಪು ಮಾಡಬೇಕು. ಇದೇ ವರ್ಗದಲ್ಲಿರುವ ಸ್ಪೃಶ್ಯ ಜಾತಿಗಳನ್ನು ಮತ್ತೊಂದು ಗುಂಪು ಮಾಡಿ ಜನಸಂಖ್ಯೆಗೆ ಆಧಾರವಾಗಿ ಮೀಸಲಾತಿ ಪ್ರಮಾಣ ನಿಗದಿ ಮಾಡಬೇಕು. ಅಲ್ಲದೆ ರಾಜಕೀಯ ಮೀಸಲಾತಿ ಕಲ್ಪಿಸಬೇಕು.
ಪರಿಶಿಷ್ಟ ಪಂಗಡ(ಎಸ್ಟಿ)ದ ವರ್ಗವನ್ನೂ ಎರಡು ಗುಂಪು ಮಾಡಬೇಕು. ಮುಖ್ಯವಾಹಿನಿಗೆ ಬಂದಿರದ ಗುಡ್ಡ ಗಾಡು, ಕಾಡು ಮೇಡುಗಳಲ್ಲಿನ ಪರಿಶಿಷ್ಟ ಪಂಗಡವನ್ನು ಒಂದು ಗುಂಪು ಮಾಡಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ಸಾಮಾಜಿಕವಾಗಿ ಮನ್ನಣೆ ಪಡೆದಿರುವ ಹಿಂದುಳಿದ ಬುಡಕಟ್ಟುಗಳೆಲ್ಲವನ್ನೂ ಪರಿಶಿಷ್ಟ ಪಂಗಡದಲ್ಲಿ 2ನೇ ವರ್ಗವಾಗಿ ವಿಂಗಡಿಸಿ ಈ ವರ್ಗಕ್ಕೆ ಆರ್ಥಿಕ, ಉದ್ಯೋಗದಲ್ಲಿ ಅಗತ್ಯ ಮೀಸಲಾತಿ ನೀಡಬೇಕು. ಈ ವರ್ಗಕ್ಕೆ ಜಾತಿ ನಿಂದನೆ ಪ್ರಕರಣ ದಾಖಲು ಮಾಡಲು ಅವಕಾಶ ನೀಡದಂತೆ ಕಾಯ್ದೆ ರೂಪಿಸುವ ಅಗತ್ಯವಿದೆ. ಮುಖ್ಯವಾಹಿನಿಯಲ್ಲಿರುವ ಹಿಂದುಳಿದ ಬುಡಕಟ್ಟುಗಳಿಗೆ ಎಸ್ಟಿ ಮೀಸಲು ನೀಡಿದರೆ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗ ಮಾಡಿಕೊಂಡು ಅಸ್ಪೃಶ್ಯ ಎಸ್ಸಿ ಸೇರಿದಂತೆ ಇತರರ ಮೇಲೆ ದೌರ್ಜನ್ಯಗಳು ಹೆಚ್ಚುವ ಸಾಧ್ಯತೆ ಇರುತ್ತದೆ. ಇದನ್ನ ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಹಿಂದುಳಿದ ಬುಡಕಟ್ಟು(ಪರಿಶಿಷ್ಟ ಪಂಗಡ) ವರ್ಗಕ್ಕೆ ಬೇರೊಂದು ಕಾಯ್ದೆ ತರುವ ಅಗತ್ಯವಿದೆ.
ಇಂತಹ ಕ್ರಾಂತಿಕಾರಕ ಬದಲಾವಣೆಯೊಂದಿಗೆ ಜನಗಣತಿ ಜೊತೆ ಜಾತಿಗಣತಿ ನಡೆಸಿ ಅನುಷ್ಠಾನಕ್ಕೆ ತಂದಲ್ಲಿ ರಾಜಕೀಯ ಅಸ್ತ್ರವಾಗುವುದು ತಪ್ಪಲಿದೆ. ಅವೈಜ್ಞಾನಿಕ ರೀತಿಯ ಸರ್ವೇಗೆ ಕಡಿವಾಣ ಬೀಳಲಿದೆ. ಸಮಾಜದಲ್ಲಿನ ಅನುಮಾನ, ಗೊಂದಲಗಳು ತಪ್ಪಲಿವೆ. ರಾಜಕೀಯ ಕಾರಣದಿಂದ ಸಾಮಾಜಿಕ ವ್ಯವಸ್ಥೆ ಹಾಳಾಗುವುದು ತಪ್ಪಲಿದೆ.
ಆಧಾರ್ ಲಿಂಕ್ ನೊಂದಿಗೆ ವೈಜ್ಞಾನಿಕವಾದ ಜಾತಿಗಣತಿ ಮಾಡಿದರೆ ಸಮಗ್ರ ವರದಿ ಸಿಗಲಿದೆ. ಆಗ ಮೀಸಲಾತಿ ನೀತಿಗಳು ಬದಲಾಗಲಿವೆ. ಅವಕಾಶ ವಂಚಿತ ಜಾತಿಗಳಿಗೂ ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ ಸಿಗುವುದರಲ್ಲಿ ಅನುಮಾನವಿಲ್ಲ. ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಅಸಮಾನತೆ ದೂರ ಮಾಡಲು ಕಲ್ಯಾಣ ಕಾರ್ಯಕ್ರಮ ರೂಪಿಸಲು ವೈಜ್ಞಾನಿಕ ಜಾತಿಗಣತಿ ಅಸ್ತ್ರವಾಗಲಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಒಬಿಸಿಗಳಿಗೆ ಜಾತಿ, ಜನ ಸಂಖ್ಯೆಗೆ ಅನುಗುಣವಾಗಿ ಲೋಕಸಭಾ, ವಿಧಾನಸಭಾ, ವಿಧಾನ ಪರಿಷತ್, ರಾಜ್ಯಸಭಾ ಸ್ಥಾನಗಳನ್ನು ಮೀಸಲಿಟ್ಟು ರಾಜಕೀಯವಾಗಿ ಸಾಮಾಜಿಕ ನ್ಯಾಯ ನೀಡುವ ಅಗತ್ಯವಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ ಹಣ ಚೆಲ್ಲಿ ಗೆಲ್ಲುವಂತ ಬಂಡವಾಳಶಾಹಿಗಳಿಗೆ ಕಡಿವಾಣ ಬೀಳಲಿದೆ. ಈ ಎಲ್ಲವನ್ನು ಸೂಕ್ಷ್ಮವಾಗಿ ಅರಿತು ಜಾತಿ ಗಣತಿ ಮಾಡಿ ಕ್ರಾಂತಿಕಾರ ಬದಲಾವಣೆಗೆ ಮೋದಿ ಅವರು ಮುನ್ನುಡಿ ಬರೆಯಬೇಕಾಗಿದೆ.
ಹರಿಯಬ್ಬೆ ಸಿ.ಹೆಂಜಾರಪ್ಪ, ಸಂಪಾದಕರು.