ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರಿನಲ್ಲಿ ರೂಪುಗೊಂಡ ‘ದಾರಿಬುತ್ತಿ’ ಬಳಗ ನಡೆಯಲು ಶುರುವಾಗಿ 12 ಮಾಸಗಳ ಹೆಜ್ಜೆ ಹಾಕಿದ್ದು, ೧೨ನೇ ಹೆಜ್ಜೆಗೆ ತಿಪಟೂರು ಸಿಕ್ಕಿತು. ಅಲ್ಲಿಗೆ ಬುತ್ತಿ ತಂದವರು ಹಲವಾರು ಮಂದಿ. ಬೆಣ್ಣೆ ಮುದ್ದೆಯಂತಹ ಬುತ್ತಿ ತಂದು ಬಿಚ್ಚಿದಾಗ ಖ್ಯಾತ ಕವಯಿತ್ರಿ, ಲೇಖಕಿ ಅನುವಾದಕಿ ಎಲ್ಲಕ್ಕಿಂತ ಮಿಗಿಲಾಗಿ ಮಾತೃಭಾವವನ್ನೇ ಮಿಂದು ಹೊದ್ದು ಬಂದಂತಿದ್ದ ಎಂ.ಆರ್. ಕಮಲಾ ಹಾಗೂ ಅರಸೀಕೆರೆಯ ಕೃಷಿಕ ಕವಯಿತ್ರಿ ಕೆ.ಪಿ. ಮಹಾದೇವಿ. ಅದನ್ನು ಬೆರಗಿನಿಂದ ಮೆದ್ದು ಬೆರಗೇ ಆಗಿಹೋದ ಕೇಳುಗರು ಅವರನ್ನೇ ಮೆತ್ತಿಕೊಂಡು ಊಟದ ಪರಿವೆಯನ್ನೇ ಬಿಟ್ಟಿದ್ದರು.
ಇಂತಹ ಆಪ್ತವಾದ ಕಾರ್ಯಕ್ರಮದಲ್ಲಿ ಕಾವ್ಯ ಮತ್ತು ಅದರ ಓದಿನ ಬಗೆಗೆ ಉಪನ್ಯಾಸ ನೀಡಿದ ಕಮಲಾ ಬದುಕು ನೆಮ್ಮದಿಯುತವಾಗಿ ಕಳೆಯಬೇಕೆಂದರೆ ಬಾಳಿನಲ್ಲಿ ಬುತ್ತಿ ಇರಬೇಕು. ಅದು ಕಾವ್ಯದ ಬುತ್ತಿ, ಓದಿನ ಬುತ್ತಿ ಸ್ನೇಹಿತರ ಒಡನಾಟದ ಪ್ರೀತಿಯ ಬುತ್ತಿ, ಪ್ರಕೃತಿಯೊಂದಿಗೆ ಪಯಣ ನಡೆಸಿದರೆ ಮನಸ್ಸು ಮತ್ತು ಬದುಕು ಆರೋಗ್ಯಕರವಾಗಿರುತ್ತದೆ.
ಬುತ್ತಿ ತುಂಬಿಕೊಳ್ಳಲು, ಬುತ್ತಿ ಬಿಚ್ಚಲು ಹಿಂದೇಟು ಹಾಕಿದರೆ, ಸೋಮಾರಿತನ ಮಾಡಿದರೆ ಬಹುಮುಖ್ಯ ಕ್ಷಣಗಳಿಂದ ವಂಚಿತರಾಗುತ್ತೇವೆ ಎಂದು ‘ದಾರಿಬುತ್ತಿ’ ಹೆಸರಿನ ಸಾಮರ್ಥ್ಯವನ್ನು ವಿಶ್ಲೇಷಿಸಿದರು. ಈ ದಾರಿಬುತ್ತಿ ಎನ್ನುವ ಬಳಗ ಪ್ರೀತಿ ಹಂಚುವ ಮಾರ್ಗ ಎಂದು ಕರೆದುಕೊಂಡಿದೆ. ಇದು ಅತ್ಯಂತ ಸಾರ್ಥಕವಾದ ಹೆಸರು. ಬದುಕಿನುದ್ದಕ್ಕೂ ಅನುಭದ ಬುತ್ತಿಯನ್ನು ಬಿಚ್ಚಿ ಬಿಚ್ಚಿ ನೋಡಿಕೊಳ್ಳುತ್ತ ಆನಂದಪಡುತ್ತ ಸಾಗುವುದನ್ನು ಕಲಿಯಬೇಕಿದೆ.
ಏನಾದರೊಂದನ್ನು ಮಾಡುವಾಗ ಇದನ್ನು ಮಾಡಬೇಕು ಎಂದು ಥಟ್ಟನೆ ಹೊಳೆಯುತ್ತದಲ್ಲಾ ಅದು ಮುಖ್ಯ ಕಾರ್‍ಯ ಕಾರಣವಿಲ್ಲದೇ ಯಾವುದೂ ಹುಟ್ಟುವುದಿಲ್ಲ. ಇದನ್ನೇ ಪುತಿನ ‘ರಸಜಾಗರ’ ಅಂದರೆ ಎಚ್ಚರಗೊಳ್ಳುವ ಸಮಯ ಎಂದಿದ್ದಾರೆ. ಇದು ಎಲ್ಲರಿಗೂ ಉಂಟಾಗುವುದಿಲ್ಲ.
ಸೂಕ್ಷ್ಮ ಸಂವೇದನೆಯುಳ್ಳವರಿಗೆ ಮಾತ್ರ ಈ ಎಚ್ಚರ ಸಾಧ್ಯ. ಸಂವೇದನಾಶೂನ್ಯರಾದರೆ ಯಾವುದೇ ಮಿಡಿತಗಳು ನಮ್ಮನ್ನು ಸ್ಪರ್ಶಿಸಲಾರವು. ನಮ್ಮ ಸುತ್ತಲ ಸಂಗತಿಗಳಿಗೆ ನಾವು ಸ್ಪಂದಿಸುತ್ತೇವೆ ಎಂದಾದರೆ ನಮ್ಮೊಳಗೆ ಅಂತಃಕರಣ ಇದೆಯೆಂದೇ ಅರ್ಥ. ಕೇವಲ ಕರಣಗಳಿದ್ದರೆ ಸಾಲದು, ಅಂತಃಕರಣವಿರಬೇಕು, ಅದನ್ನು ಮೂಡಿಸಿಕೊಳ್ಳುವ ಬೆಳೆಸುವ ಶಕ್ತಿಯನ್ನು ಕಾವ್ಯ ಮತ್ತು ಸಾಹಿತ್ಯ ಮಾತ್ರ ಉಂಟುಮಾಡುತ್ತದೆ.
ಅಂತಃಕರಣ ನಿರಂತರವಾಗಿ ಜಾಗೃತವಾಗಿದ್ದಾಗ ಕವಿತೆ ನಮ್ಮ ಕೈಹಿಡಿಯುತ್ತದೆ, ಬೆಳಕಾಗುತ್ತದೆ. ನಿಚ್ಚಳ ದಾರಿ ತೋರುತ್ತದೆ ಎಂದು ನುಡಿದರು. ಅವರು ದಾರಿಬುತ್ತಿ ಬಳಗ ತಿಪಟೂರಿನಲ್ಲಿ ಸುಖಾಂಕ್ಷಾ ಸೇವಾಶ್ರಮದ ಯಶೋಧ ಪ್ರಾರ್ಥಿಸಿದರು. ಗಾಯಕ ವಿದ್ಯಾರ್ಥಿ ದರ್ಶನ್ ಎಲ್ಲರನ್ನೂ ಸ್ವಾಗತಿಸಿದರು.
ತಿಪಟೂರು ತಾಲ್ಲೂಕು ನಿವೃತ್ತ ನೌಕರರ ಸಂಘದ ಕಾರ್ಯದರ್ಶಿಗಳು, ನೂತನವಾಗಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ.ಆರ್. ಗುರುಸ್ವಾಮಿ, ಸಮಾಜ ಸೇವಕರಾದ ಸ್ವರ್ಣಗೌರಿ, ಉಪನ್ಯಾಸಕಿ ಹಾಗೂ ಲೇಖಕಿ ಗೀತಾಲಕ್ಷ್ಮಿ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಲೇಖಕಿ ಬಾ.ಹ. ರಮಾಕುಮಾರಿ ಅವರು ಅಧ್ಯಕ್ಷತೆ ವಹಿಸಿ ಹಿಂದಿನ ಕಾಲಘಟ್ಟದ ತಮ್ಮ ಹಾಗೂ ಎಂ.ಆರ್. ಕಮಲ ಹಾಗೂ ಸಮಕಾಲೀನ ಕವಯಿತ್ರಿಯರ ಒಡನಾಟವನ್ನು ಮೆಲುಕು ಹಾಕಿ, ಕಾವ್ಯ ಯಾವತ್ತೂ ಮನುಷ್ಯನನ್ನು ಜೀವಂತವಿಡುತ್ತದೆ. ಎಲ್ಲಾ ಕಾಲಕ್ಕೂ ಬದುಕಿರುತ್ತದೆ ಎಂದುನುಡಿದರು.
ಸುಮಾರು ೧೨ ಮಂದಿ ಕವನ ವಾಚಿಸಿದರು. ಕಮಲ ಅವರ ಕವಿತೆಗಳನ್ನು ಯಶೋಧ ಮತ್ತು ದರ್ಶನ್ ಮುಂತಾದವರು ಹಾಡಿದರು.
ಪ್ರೇಮ, ವೇದ, ಕೃಷ್ಣ, ರಂಜಿತ್, ದಾದಾಪೀರ್ ತಂಡದವರಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆದವು. ಕವಯಿತ್ರಿ ಹಾಗೂ ಶಿಕ್ಷಕಿ ರಂಗಮ್ಮಹೊದೆಕಲ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ನೃತ್ಯ ರಂಗಭೂಮಿಯ ವಾಣಿಸತೀಶ್, ದೇಸೀ ಚಿಂತಕ ಬರಹಗಾರ ಉಜ್ಜಜ್ಜಿ ರಾಜಣ್ಣ, ಮಹಿಳಾ ಸಂಘಟನೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ತಾಲ್ಲೂಕು ನಿವೃತ್ತ ನೌಕರರ ಸಂಘದ ಪದಾಧಿಕಾರುಗಳು ಮುಂತಾದವರು ಉಪಸ್ಥಿತರಿದ್ದರು.