ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚನ್ನಪಟ್ಟಣ ಉಪ ಚುನಾವಣೆಯ NDA ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮಂಗಳವಾರ ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿ ಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ಭಾಗಿಯಾಗಿ ಮತಯಾಚನೆ ಮಾಡಿದರು.
ದೇವೇಗೌಡರು ಕೋಡಂಬಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿರುಪಾಕ್ಷಿಪುರ ಗ್ರಾಮ ಪಂಚಾಯಿತಿಯ ವಿರುಪಾಕ್ಷಿಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಆಯ್ಕೆ ಮಾಡುವಂತೆ ಕೋರಿಕೊಂಡರು.
ಇದಾದ ನಂತರ ಕೋಡಂಬಹಳ್ಳಿ, ಜೆ.ಬ್ಯಾಡರಹಳ್ಳಿ, ವೈಟಿ ಹಳ್ಳಿ ಭೂಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಬಿರುಸಿನ ಮತಯಾಚನೆ ಮಾಡುವ ಮೂಲಕ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆಗಮಿಸುವ ಸುದ್ದಿ ಕೇಳಿದ ಹತ್ತಾರು ಹಳ್ಳಿಗಳ ಅಭಿಮಾನಿಗಳು, ಜೆಡಿಎಸ್-ಬಿಜೆಪಿ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ನಾಯಕರೊಂದಿಗೆ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ದೇವೇಗೌಡರು ಪ್ರಚಾರಕ್ಕಿಳಿಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಲೋಕಸಭಾ ಚುನಾವಣೆ ವೇಳೆ ಪಕ್ಷದ ಅಳಿವು ಉಳಿವಿಗಾಗಿ ಜೆಡಿಎಸ್ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರು.
ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ದೇವೇಗೌಡರ ಪ್ರಚಾರ ಕುರಿತು ಮಾತನಾಡಿ, ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, 92ರ ವಯಸ್ಸಿನಲ್ಲೂ ದೇವೇಗೌಡರ ಫಿಟ್‌ನೆಸ್‌ನೋಡಿದರೆ ಅಶ್ಚರ್ಯವನ್ನುಂಟು ಮಾಡುತ್ತದೆ.
ಬೂತ್ ಮಟ್ಟದ ವಿಶ್ಲೇಷಣೆ ಮತ್ತು ದತ್ತಾಂಶ ಪರಿಶೀಲನೆಗೆ ಕುಳಿತಾಗ ತಜ್ಞರೂ ನಾಚಿಕೆಪಡುವಂತೆ ಮಾಡುತ್ತಾರೆ. ಅವರ ದೈಹಿಕ ಹಾಗೂ ಮಾನಸಿಕ ಸ್ಥೈರ್ಯ ನೋಡಿದರೆ ಆಶ್ಚರ್ಯವಾಗುತ್ತದೆ. ಆದರೆ, ಚನ್ನಪಟ್ಟಣದಲ್ಲಿ ಗೌಡರಿಗೆ ಹಲವು ಹಿತೈಷಿಗಳಿದ್ದರೂ ಜೆಡಿಎಸ್ ಗೆಲುವುದು ಖಚಿತವಿಲ್ಲ ಎಂದು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ದೇವೇಗೌಡ ಅವರು ಪ್ರಚಾರ ನಡೆಸಿದ್ದರು. ಆದರೂ ಸೋಲನ್ನು ಅನುಭವಿಸಿದ್ದರು. ಇದಾದ ಬಳಿಕ ದೇವೇಗೌಡರ ವರ್ಚಸ್ಸು ಕಡಿಮೆಯಾಗಿದೆ ಎಂದೆನಿಸುತ್ತಿದೆ ಎಂದು ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಜೆಡಿಎಸ್ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಎಂಎಲ್‌ಸಿ ಅಡಗೂರು ವಿಶ್ವನಾಥ್ ಮಾತನಾಡಿ, ಗೌಡರ ಪ್ರಚಾರ ನಿಖಿಲ್‌ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಸಚಿವರುಗಳಾದ ಸಿಎಸ್ ಪುಟ್ಟರಾಜು, ಗೋಪಾಲಯ್ಯ, ಮಾಜಿ ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ ಅವರು ಸೇರಿದಂತೆ ಹಲವರು ಉಪ್ಥಿತರಿದ್ದರು.