ಕರ್ತವ್ಯ ಲೋಪ : ನರೇಗಾ ತಾಂತ್ರಿಕ ಸಹಾಯಕ ಕರ್ತವ್ಯದಿಂದ ಬಿಡುಗಡೆ
ಚಿತ್ರದುರ್ಗ :
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿದ್ದ ತಾಂತ್ರಿಕ ಸಹಾಯಕ ಆರ್.ಸಂಜಯ್ ಅವರನ್ನು ಕರ್ತವ್ಯ ಲೋಪ ಹಿನ್ನಲೆಯಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.
ಮೊಳಕಾಲ್ಮೂರು ತಾಲ್ಲೂಕು ತುಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಪ್ರಸ್ತುತ ಚಳ್ಳಕೆರೆ ತಾಲ್ಲೂಕು ತಾಂತ್ರಿಕ ಸಹಾಯಕ ಆರ್.ಸಂಜಯ್ ಇವರು ತುಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಬನಹಳ್ಳಿ ಗ್ರಾಮದ ರಿ.ಸರ್ವೆ ನಂ.೨೭/೧ಎ ರ ಜಮೀನಿನಲ್ಲಿ ಪಿಡಿಒ ಮತ್ತು ಜಮೀನು ಮಾಲೀಕರಾದ ಮಂಗಳಮ್ಮ ಕೋಂ ಗುಡ್ಡುಪಾಲಯ್ಯ ಅವರ ಹೆಸರಿನಲ್ಲಿರುವ ಜಮೀನಿನಲ್ಲಿ ವಿರುಪಣ್ಣ ನಾಯಕ ಇವರ ಹೆಸರಿನಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ನಿಯಮಬಾಹಿರವಾಗಿ ಅನುಷ್ಠಾನಗೊಳಿಸಿರುವುದರಿಂದ ಜಿಲ್ಲಾ ಪಂಚಾಯಿತಿ ಓಂಬುಡ್ಸ್ ಪರ್ಸನ್ ತನಿಖೆ ನಡೆಸಿದ ಸಂದರ್ಭದಲ್ಲಿ ಕಂಡುಬAದಿದ್ದು, ನರೇಗಾ ಮಾರ್ಗಸೂಚಿ ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿದ್ದಾರೆ.
ನರೇಗಾ ಯೋಜನೆಯ ಮಾರ್ಗಸೂಚಿ ಉಲ್ಲಂಘನೆ ಮಾಡಿರುವುದರಿಂದ ತಾಂತ್ರಿಕ ಸಹಾಯಕ ಆರ್.ಸಂಜಯ್ ಅವರ ಸೇವೆಯು ಇಲಾಖೆಗೆ ಅವಶ್ಯಕತೆ ಇಲ್ಲದಿರುವುದರಿಂದ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.
ಜೆ.ಬಿ.ಹಳ್ಳಿ ಪಿಡಿಒ ಸೇವೆಯಿಂದ ಅಮಾನತು
ಚಿತ್ರದುರ್ಗ (ಕರ್ನಾಟಕ ವಾರ್ತೆ)ಫೆ.೧೩:
ಮೊಳಕಾಲ್ಮೂರು ತಾಲ್ಲೂಕು ಜೆ.ಬಿ. ಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಸುರೇಶ್ ಅವರನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಸುರೇಶ್ ಅವರು ನಿಯುಕ್ತಿಗೊಳಿಸಿದ ಸ್ಥಳಕ್ಕೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ, ಒಬ್ಬ ಜವಾಬ್ದಾರಿಯುತ, ಸರ್ಕಾರಿ ನೌಕರರಾಗಿದ್ದುಕೊಂಡು, ಸರ್ಕಾರದ ಮತ್ತು ಮೇಲಾಧಿಕಾರಿಗಳ ಆದೇಶಗಳನ್ನು ಉಲ್ಲಂಘನೆ ಮಾಡುವ ಮೂಲಕ ಸರ್ಕಾರಿ ನೌಕರರ ವೃತ್ತಿಗೆ ತರವಲ್ಲದ ರೀತಿ ವರ್ತಿಸಿ, ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದ ಕಾರಣ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಅಮಾನತು ಅವಧಿಯಲ್ಲಿ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಮತ್ತು ಅನ್ಯ ಉದ್ಯೋಗದಲ್ಲಿ ತೊಡಗುವಂತಿಲ್ಲ ಹಾಗೂ ನಿಯಮಾನುಸಾರ ಜೀವನಾಧಾರ ಭತ್ಯೆಗೆ ಅರ್ಹರಿರುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶದಲ್ಲಿ ತಿಳಿಸಿದ್ದಾರೆ.
ಫೆ. ೧೭ ರಿಂದ ವಾಹನ ಸಂಚಾರ ಗಣತಿ
ಚಿತ್ರದುರ್ಗ (ಕರ್ನಾಟಕ ವಾರ್ತೆ) ಫೆ.೧೩:
ಲೋಕೋಪಯೋಗಿ ಇಲಾಖೆ ವತಿಯಿಂದ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ೨೦೨೫ ನೇ ಸಾಲಿನ ವಾಹನ ಸಂಚಾರ ಗಣತಿ ಕಾರ್ಯವನ್ನು ಫೆ. ೧೭ ರಂದು ಬೆಳಿಗ್ಗೆ ೦೬ ಗಂಟೆಯಿAದ ಫೆ. ೨೪ ರ ಬೆಳಿಗ್ಗೆ ೦೬ ಗಂಟೆಯವರೆಗೆ ಒಟ್ಟು ೦೭ ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಫೆ. ೧೭ ರಿಂದ ಏಳು ದಿನಗಳ ಕಾಲ ನಡೆಯಲಿರುವ ವಾಹನ ಸಂಚಾರ ಗಣತಿ ಕಾರ್ಯ ಸುಗಮವಾಗಿ ನಡೆಸಲು ವಾಹನ ಚಾಲಕರು ಹಾಗೂ ಸಾರ್ವಜನಿಕರು ಗಣತಿ ಜರುಗುವ ಪ್ರದೇಶಗಳಲ್ಲಿ ವಾಹನಗಳನ್ನು ನಿಧಾನವಾಗಿ ಚಲಿಸಿ, ಸಹಕಾರ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.