ಪರಿಸರ, ವೃಕ್ಷ ಪ್ರೇಮಿ ಜಿಲ್ಲಾಧಿಕಾರಿ ಅಮರನಾರಾಯಣ್ ಗಿಡ ಮರ ನೆಟ್ಟು ಜೋಗಿಮಟ್ಟಿ ರಕ್ಷಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-50

 ಜೋಗಿ ಗುಡ್ಡದ ಅರ್ಧಕ್ಕೂ, ಪ್ರತಿದಿನದ ನಡಿಗೆ, ಹಾಗು ವ್ಯಾಯಾಮ ನಮ್ಮದು. ವಾಹನಗಳನ್ನು ಮೇಲಕ್ಕೆ ಬಿಡುತ್ತಿರಲಿಲ್ಲವಾದ್ದರಿಂದ ನಡಿಗೆಗೆ ತೊಂದರೆಗಳೇ ಇರುತ್ತಿರಲಿಲ್ಲ.

ಆ ಸಂದರ್ಭದಲ್ಲಿ ಇಲ್ಲಿ ಕರ್ತವ್ಯದಲ್ಲಿದ್ದ, ಜಿಲ್ಲಾಧಿಕಾರಿಗಳಾದಂತಹ ಅಮರನಾರಾಯಣ್ ಅವರು, ಪರಿಸರ ಪ್ರೇಮಿಗಳು, ವೃಕ್ಷ ಪ್ರೇಮಿಗಳಾಗಿದ್ದರಿಂದ, ತನಿಖಾ ಠಾಣೆಯಿಂದ ಜೋಗಿ ಗುಡ್ಡದ ಮೇಲಿನ ಬಂಗ್ಲೆವರೆಗೂ, ರಸ್ತೆಯ ಎರಡೂ ಬದಿಗಳಲ್ಲಿ, ವಿಶೇಷವಾದ ಗಿಡ, ಮರಗಳನ್ನ ನೆಡೆಸಿ, ಪ್ರಾಣಿ, ಪಕ್ಷಿ, ವೃಕ್ಷ ಪ್ರೇಮಿಗಳಿಗೆ, ಸ್ಪೂರ್ತಿಯಾಗಿದ್ದಂತಹ ದಿನಗಳವು. ಪ್ರತೀ ವಾರಕ್ಕೊಮ್ಮೆ ಕೆಳಗಿನಿಂದ, ಮೇಲಿನ ಬಂಗ್ಲೆವರೆಗೂ ನಡಿಗೆಯಲ್ಲೇ ಬರುತ್ತಿದ್ದರು.

ಅವರ ಜೊತೆ ಇಲಾಖೆಯ ಅಧಿಕಾರಿಗಳು,ನಗರದ ಸಂಘ ಸಂಸ್ಥೆಗಳು, ಶಾಲಾ-ಕಾಲೇಜಿನ ಮಕ್ಕಳು ಸೇರಿ,ಜೋಗಿ ಗುಡ್ಡದ ರಸ್ತೆ ಭಾನುವಾರ ಬಂತೆಂದರೆ, ತುಂಬಿ ತುಳುಕುತ್ತಿತ್ತು.

ಪ್ರತಿ ಭಾನುವಾರ ದಟ್ಟರಾತ್ರಿ, ಮೂರು ಗಂಟೆಗೆ ವಿಹಾರಕ್ಕೆ ತೆರಳುತ್ತಿದ್ದ ಎಂಜಿನಿಯರ್ ಬಸವರಾಜ್, ಡಾ.ಕಾಂತರಾಜ್, ಕೆ ಒ ಎಫ್. ಆನಂದ್, ಗೋಪಾಲಾಚಾರ್ ಇವರುಗಳು, ನಾವೇ ಬೇಗ ಅಂದ್ರೆ, ಇವರು ನಮಗೇ ಎದುರಾಗ್ತಿದ್ರು! ವಾರಕ್ಕೊಮ್ಮೆಯ ನಡಿಗೆಯಿವರದು.

ಪ್ರತಿ ಭಾನುವಾರ ಮೂರು ಮುವ್ವತ್ತರ, ಅಲಾರಾಂ ನ ಶಬ್ದಕ್ಕೆ ಏಳುವ ನಾವುಗಳು,ನಿತ್ಯ ಕರ್ಮಗಳನ್ನು ಮುಗಿಸಿ, ನಾಲ್ಕರ ಸುಮಾರಿಗೆ ರಸ್ತೆ ಗಿಳಿಯುತ್ತಿದ್ದೆವು.

ಸದ್ಯದ ಸಮಾಧಾನದ ಸಂಗತಿ ಎಂದರೆ,ಆ ದಿನಗಳಲ್ಲಿ ಅಂತಹ ನಡಿಗೆಗಳಿಂದ, ಯಾರಿಗೂ ಏನು ಆಗಿಲ್ವಲ್ಲಾ, ಅದೇ ಸಂತೋಷ.ಅಷ್ಟೊಂದು ಬಿರುಸಾದ ನಡಿಗೆಗಳು ಪ್ರತಿಯೊಬ್ಬರದು. ತೊಟ್ಟ ಬಟ್ಟೆ ಕಿತ್ತೊಗೆದು ನಡೆಯುವಂತಹ ಸ್ಥಿತಿ.

ಅನೇಕ ರೀತಿಯ ಸ್ನಾನಗಳನ್ನು ಕೇಳಿದ್ದೇನೆ,ಈ ರಸ್ತೆಯಲ್ಲಿ ನಮ್ಮದು ಬೆವರಿನ ಸ್ನಾನ. ಪಾದದಿಂದ ತಲೆಯವರೆಗೆ ಬೆಂಕಿ ಇಟ್ಟಂತಹ ಅನುಭವ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳೇನಾದರೂ ಇದ್ದರೆ, ಒಂದು ಪರ್ಲಾಂಗು ಸಹ, ಈ ರಸ್ತೆಗಳಲ್ಲಿ ಹೆಜ್ಜೆಗಳನ್ನ ಹಾಕಲಾಗುವುದಿಲ್ಲ.

ಪ್ರಕೃತಿಯ ಪರೀಕ್ಷೆಯಲ್ಲಿ, ನಿಮ್ಮ ಪ್ರಶ್ನೆಗಳಿಗೆ ನೀವೇ, ಉತ್ತರಗಳಾಗಿ ಬಿಡಬಹುದು. ಜೋಗಿಗುಡ್ಡವೆಂದರೆ ಸಮುದ್ರ ಮಟ್ಟದಿಂದ ಮೂರುಸಾವಿರ ಅಡಿಗಳ ಎತ್ತರದ ಬೆಟ್ಟವದು. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿದ್ದಂತಹ ಬ್ರಿಟಿಷ್ ಅಧಿಕಾರಿಗಳು,ತಾವು  ವಿಹರಿಸಲಿಕ್ಕಾಗಿಯೇ ಕಟ್ಟಿಸಿಕೊಂಡಂತಹ ಬಂಗ್ಲೆ. ಈಗಲೂ ಸುಸ್ಥಿತಿಯಲ್ಲಿದೆ.

 ನಮ್ಮ ಜೋಗಿ ಜೋಡಿನ ಹೆಜ್ಜೆಗಳಲ್ಲಿ,ತುಂಬಾ ಸುಸ್ಥಿತಿಯ ಹೆಜ್ಜೆಗಳಂದ್ರೆ, ಅದು ನಮ್ಮ ಡಾ.ನಾಗರಾಜ್ ನಾಯ್ಕ್ ಮಾತ್ರ.ಇವರು ನಡೆಯುತ್ತಿದ್ದರೇ,ಅವರ ಶ್ರೀಮತಿಯವರು ಓಡುತ್ತಿದ್ದುದು ನೆನಪು. ಅವರಿಗೆ ಇವರ ಸಮ, ನಡೆಯಲಾಗುತಿರಲಿಲ್ಲ, ಹಾಗಾಗಿ ಓಡದೆ ವಿಧಿ ಇರಲಿಲ್ಲ.

ನಮ್ಮಲ್ಲಿನ ಕೆಲವರದಂತೂ ಡಾಕ್ಟರ್ ಜೊತೆಗೆ ಸ್ಪರ್ಧೆನೇ. ಉಸಿರಾಟದ ಉದ್ವೇಗದಲ್ಲಿ, ಹೃದಯ ಬಾಯಿಗೆ ಬಂದರೂ  ಬಿಡುತ್ತಿರಲಿಲ್ಲ.ಪಾದದ ಮೇಲಿನ ಹಾಗೂ,ತೊಡೆಯ ಮಾಂಸ  ಖಂಡಗಳಿಗೆ,ನೋವು ನಿವಾರಕ ಮುಲಾಮು ಹಚ್ಚಿಕೊಂಡಿರುವ ಸಂದರ್ಭಗಳಿವೆ.

ಅವರು ಅಷ್ಟೇ,ನಡಿಗೆಯ ಹೋರಾಟದಲ್ಲಿ ಮುಂಚೂಣಿಯೇ,ಏನೇ ಆದರೂ ಸರಿಯುತ್ತಿರಲಿಲ್ಲ.ಎಲ್ಲರ ಹೆಜ್ಜೆಗಳಲ್ಲಿ,ರಸ್ತೆ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ,ದೂರದ ಬಂಗ್ಲೆ,ಈ ನಡಿಗೆಯ ರಭಸಕ್ಕೆ,ಎದುರಿಗೆ ಹತ್ತಿರವಾಗಿಯೇ ಬಿಡುತ್ತಿತ್ತು.

 ನನ್ನದೊಂದು ಮನವಿ ಮಾತು.
 ದುರ್ಗದ ವಸತಿ ಪ್ರದೇಶದ ವಾತಾವರಣವೇ ಬೇರೆ, ಜೋಗಿ ಮಟ್ಟಿ ಅಭಯಾರಣ್ಯದ ದೃಶ್ಯ ಕಾವ್ಯವೇ ಬೇರೆ. ಇಲ್ಲಿ ಗಿಡ, ಮರ, ಬಳ್ಳಿ, ಹೂಗಳು, ನಿಮ್ಮೊಂದಿಗೆ ಅಂತರ್ಗತದಲಿ ಚಕ್ಕಂದವಾಡುತ್ತವೆ. ಮುಂಜಾವಿನ ಮಂಜು, ಬಿಳಿ ಹಚ್ಚಡದಂತೆ ಹೊದಿಸಿ, ವನ ಸೊಬಗಿಗೆ ಕಳೆ ಇಟ್ಟಂತಿರುತ್ತದೆ.

ಸಾಲು ಸಾಲು ಬೆಟ್ಟ ಗುಡ್ಡಗಳ ದೂರದ ಬಯಲಿಗೆ,ಹಸಿರುಟ್ಟ ಕಾಡಿಗೆ ಮಂಜಿನ ಮೋಡಗಳು, ಚುಂಬಿಸಿ ಸರಿಯುತ್ತಿರುತ್ತವೆ. ತಂಗಾಳಿಯು ತಂಪೆರೆಯುತ್ತಿದ್ದರೆ,ಇಬ್ಬನಿ ಮುತ್ತುತ್ತಲೇ,ಎಲೆ ಎಲೆಗಳ ಮೇಲೆ ಸ್ಪಟಿಕದಂತೆ ಜಾರುತ್ತಿರುತ್ತದೆ.ಮಬ್ಬಿನಲಿ ಎಚ್ಚೆತ್ತ ಹಕ್ಕಿ,ಪಕ್ಷಿಗಳು ರೆಕ್ಕೆಗಳಾಡಿಸುವ ಕಲರವವಂತೂ,ಪುಳಕಗೊಂಡ ಸಂತಸದ ಧ್ವನಿಗಳು,ದೈವ ನೆಲದ ಪ್ರಕೃತಿಯ ಸ್ವರ ಸಂಯೋಜನೆಗಳೇ,ಕಿನ್ನರ ಲೋಕದ ಸಂಗೀತವೇ ಅದು.

ಕತ್ತಲು ಸರಿದು ಅರುಣೋದಯದ ಕಿರಣಗಳು ಹಾಯುತ್ತಿದ್ದಂತೆ, ಮರೆಯಾಗುವ ಇಬ್ಬನಿ,ಮೆಲ್ಲ ಮೆಲ್ಲನೆ ಅಭಯಾರಣ್ಯದ ಸೊಬಗನ್ನು ಮಂಜಿನ ತೆರೆಯಿಂದ ಸರಿಸಿ,ಹೊನ್ನು ಎರಚಿದಂತಾಗಿ ಹಸಿರ ಬಸಿರಿಗೆ ತೆರೆದುಕೊಳ್ಳುತ್ತದೆ.ಯಾರಾದರೂ ಸರಿ ಇಲ್ಲಿ ಅನುಭವಿಸಿದ,

ಆಳ ಅಗಲದ ಅಂತರ್ಮುಖಿ ಭಾವವನ್ನ,ಸ್ಪಷ್ಟವಾಗಿ ಅಕ್ಷರಗಳಲ್ಲಿ ದಾಖಲಿಸುವುದು ಕಷ್ಟವೇ. ನನ್ನೂರು ಗಿಡಮೂಲಿಕೆಗಳ ನಾಡು,ವನ ಸುಮಗಳ ಬೀಡು,ಪ್ರಾಣಿ ಪಕ್ಷಿಗಳ ತವರು,ಗಿರಿ ಕಂದರ ಕೆರೆ ತೊರೆಗಳ ಕಲ್ಪತರು.ಈ ಗಂಧದ ನಾಡಿಗೆ, ನನ್ನೂರೊಂದು ಚಂದದ ಮುಕುಟವಲ್ಲದೆ ಮತ್ತೇನು.

ನನಗೆ ಸ್ವರ್ಗ ಹೇಗೋ ಗೊತ್ತಿಲ್ಲ,ನರಕವನ್ನೇ ಸ್ವರ್ಗವಾಗಿಸಿ ಉಂಡವನು. ನನ್ನ ನೆಲದಲ್ಲಿ ನಡೆದಾಡಿದರೆ ಸ್ವರ್ಗಕ್ಕೆ ಬಂದು ಹೋದಂತೆಯೇ,ಇದೆ ನನ್ನ, ನಮ್ಮೆಲ್ಲರ ಸ್ವರ್ಗ.
ಮುಂದುವರೆಯುವುದು……
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.

- Advertisement -  - Advertisement -  - Advertisement - 
Share This Article
error: Content is protected !!
";