ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕದ ಟಾಪ್ 10 ದೇವಸ್ಥಾನಗಳಲ್ಲಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವೂ ಒಂದು. ಹಾಗೆಯೇ ಹೆಚ್ಚು ಆದಾಯ ಬರುವ ಮುಜರಾಯಿ ದೇವಾಲಯವೂ ಹೌದು. ಇದೀಗ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸುವ ಉದ್ದೇಶದಿಂದ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಪ್ರಾಧಿಕಾರದ ಮೊದಲ ಕಾರ್ಯದರ್ಶಿಯಾಗಿ ಪಿ.ದಿನೇಶ್ ಅಧಿಕಾರ ಸ್ವೀಕರಿಸಿದರು.
ಮಾಧ್ಯಮದ ಜೊತೆ ಮಾತನಾಡಿದ ಅವರು, 2024ರ ಜುಲೈ 1ರಿಂದ ಜಾರಿಗೆ ಬರುವಂತೆ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಜಾರಿಗೆ ಬಂದಿದೆ. ಕ್ಷೇತ್ರವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಅತ್ಯುನ್ನತ ಧಾರ್ಮಿಕ ಕ್ಷೇತ್ರವನ್ನಾಗಿ ಮಾರ್ಪಡಿಸುವ ಸಲುವಾಗಿ ಪ್ರತ್ಯೇಕವಾಗಿ ಪ್ರಾಧಿಕಾರ ರಚಿಸಲಾಗಿದೆ. ಮೊದಲ ಕಾರ್ಯದರ್ಶಿಯಾಗಿ ಜೂನ್ 9ರಂದು ನಾನು ಅಧಿಕಾರ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು.
ಪ್ರಾಧಿಕಾರಕ್ಕೆ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಉಪಾಧ್ಯಕ್ಷರು, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಸದಸ್ಯರಾಗಿದ್ದು, 5 ಜನ ನಾಮನಿರ್ದೇಶಿತ ಸದಸ್ಯರು ಪ್ರಾಧಿಕಾರದಲ್ಲಿರುತ್ತಾರೆ ಎಂದು ಮಾಹಿತಿ ನೀಡಿದರು.
ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ಆ್ಯಕ್ಷನ್ ಪ್ಲ್ಯಾನ್ ಸಿದ್ದಪಡಿಸಿ ಹಂತಹಂತವಾಗಿ ಅನುಷ್ಠಾನಗೊಳಿಸಲು ಯೋಜನೆಗಳನ್ನು ರೂಪಿಸಿದ್ದು, ಮೊದಲನೆಯದಾಗಿ ಮಾಸ್ಟರ್ ಪ್ಲ್ಯಾನ್ ರಚಿಸಿ ದೇವಾಲಯ ವ್ಯಾಪ್ತಿಯ 10 ಎಕರೆ 23 ಗುಂಟೆ ಮತ್ತು ಎಸ್.ನಾಗೇನಹಳ್ಳಿ ಗ್ರಾಮದ (ಪಾಲ್ ಪಾಲ್ ದಿನ್ನೆ ಕೆರೆ ಹತ್ತಿರ) ಇರುವ 23 ಎಕರೆ 18 ಗುಂಟೆ ಜಮೀನುಗಳಲ್ಲಿ ಕೈಗೊಳ್ಳಬೇಕಾದ ಅತ್ಯವಶ್ಯಕವಾದ ಮತ್ತು ಅತಿ ತುರ್ತಾಗಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
ನೂತನ ಅನ್ನದಾಸೋಹ ಭವನ, ಕ್ಯೂ ಕಾಂಪ್ಲೆಕ್ಸ್, ಪಾರ್ಕಿಂಗ್ ಮತ್ತು ಇನ್ನಿತರೆ ಸವಲತ್ತುಗಳನ್ನು ಮೊದಲನೆಯ ಹಂತದಲ್ಲಿ ಮತ್ತು ಎರಡನೆಯ ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ದೇವಾಯದ ಸುತ್ತಲಿನ 400 ಮೀ. ಸುತ್ತಳತೆಯಲ್ಲಿನ ಸರ್ಕಾರಿ ಮತ್ತು ಖಾಸಗಿ ಜಮೀನಿಗಳನ್ನು ಪಡೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು. ಶ್ರೀ ಘಾಟಿ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲೀಕರಣ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಕ್ರಮ ವಹಿಸಲಾಗುವುದು” ಎಂದರು.
ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಮತ್ತು ಆದಾಯ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ದೇವಾಲಯಕ್ಕೆ ಬರುವ ಆದಾಯವನ್ನು ಅದೇ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು. ಅದಕ್ಕಾಗಿ ವಾರ್ಷಿಕ ಆಯವ್ಯಯ ತಯಾರಿಸಿ ಸಿಬ್ಬಂದಿ ವೇತನ, ದೇವಾಲಯದಲ್ಲಿ ನಡೆಯುವ ಸೇವೆಗಳು, ಅನ್ನದಾಸೋಹ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು” ಎಂದು ತಿಳಿಸಿದರು.”ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ವಾಸ್ತುಶಿಲ್ಪಿಗಳಿಂದ ಪ್ಲ್ಯಾನ್ ಮಾಡಿಸಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಅಂದಾಜುಪಟ್ಟಿ ಮಾಡಿಸಿ ಪ್ರಾಧಿಕಾರದ ಅನುಮೋದನೆ ಪಡೆದು ಅನುಷ್ಠಾನಗೊಳಿಸಲಾಗುವುದು. ಘಾಟಿ ಕ್ಷೇತ್ರಕ್ಕೆ ಸಾಮಾನ್ಯ ದಿನಗಳಂದು ಸುಮಾರು 1000 ಜನ, ಭಾನುವಾರ ಮತ್ತು ಮಂಗಳವಾರಗಳಂದು 12 ರಿಂದ 15 ಸಾವಿರ ಜನರು ಆಗಮಿಸುತ್ತಾರೆ” ಎಂದು ಹೇಳಿದರು.
ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, “ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಆಗಸ್ಟ್ 15ರೊಳಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಚಿವರು ಸೂಚಿಸಿದ್ದಾರೆ. ಇದಕ್ಕಾಗಿ ಮೊದಲನೆಯ ಹಂತದಲ್ಲಿ ಗ್ರಾಮ ಪಂಚಾಯ್ತಿಯವರ ಸಹಯೋಗದೊಂದಿಗೆ ಸ್ಥಳೀಯವಾಗಿ ಅಂಗಡಿ ಮಳಿಗೆಗಳಲ್ಲಿ ಬಳಸಲಾಗುತ್ತಿರುವ ಪ್ಲಾಸ್ಟಿಕ್ ನಿಯಂತ್ರಿಸುವ ಬಗ್ಗೆ, ಪ್ಲಾಸ್ಟಿಕ್ ಬಳಕೆ ಮಾಡಿದವರ ಮಾರಾಟ ಪರವಾನಗಿ ರದ್ದು ಮಾಡಲು ಕ್ರಮ ಕೈಗೊಳ್ಳಲಾವುದು” ಎಂದು ಮಾಹಿತಿ ನೀಡಿದರು.
ಮಾಲಿನ್ಯ ನಿಯಂತ್ರಣ ಬೋರ್ಡ್ ಸಲಹೆ ಪಡೆದು ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ದೇವಾಲಯದ ಸುತ್ತಲಿನ 100 ಮೀ. ಸ್ಥಳವನ್ನು ಪ್ಲಾಸ್ಟಿಕ್‌ಮುಕ್ತ ಪ್ರದೇಶವೆಂದು ಘೋಷಿಸಿ ಈ ಬಗ್ಗೆ ಭಕ್ತರಲ್ಲಿ ಅರಿವು ಮೂಡಿಸಲಾಗುವುದು ಎಂದು ದೇವಾಲಯಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ತರದಂತೆ ಭಕ್ತರಲ್ಲಿ ಮನವಿ ಮಾಡಿದರು.