ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿವೃತ್ತ ಪತ್ರಕರ್ತರ ಮಾಸಾಶನದಲ್ಲಿರುವ ಕಠಿಣ ಷರತ್ತುಗಳನ್ನು ಸರಳೀಕರಣ ಮಾಡುವಂತೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಆಗ್ರಹಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಪತ್ರಕರ್ತರ ಮಾಸಾಶನ ನೀಡಲು ಕಠಿಣ ಷರತ್ತುಗಳನ್ನು ಹಾಕಿರುವುದು ಮಾತ್ರ ಸರಿಯಲ್ಲ. ಅರ್ಜಿ ಹಾಕಿದ ಪತ್ರಕರ್ತರಿಗೆ ಮಾಸಾಶನ ಮಂಜೂರು ಮಾಡಲು ಈ ಕಠಿಣ ಷರತ್ತುಗಳು ಅಡ್ಡಿಯಾಗಿವೆ. ಈ ಯೋಜನೆಯಿಂದ ಬಹುಪಾಲು ಪತ್ರಕರ್ತರು ವಂಚಿತರಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಿಗೂ ಅವರ ನಿವೃತ್ತಿ ಸಂದರ್ಭದಲ್ಲಿ ಮಾಸಾಶನ ಯೋಜನೆ ಪ್ರಯೋಜನಕ್ಕೆ ಬರುತ್ತಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಹಲವು ಪತ್ರಕರ್ತರಿಗೂ ಈ ಯೋಜನೆ ಉಪಯೋಗಕ್ಕೆ ಬಾರದಂತಾಗಿರುವುದು ವಿಷಾದನೀಯ.
ಆದುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಾಸಾಶನ ಮಂಜೂರು ಮಾಡಲು ಅಡ್ಡಿಯಾಗಿರುವ ಕಠಿಣ ಷರತ್ತುಗಳನ್ನು ಕಡ್ಡಾಯವಾಗಿ ತೆರವುಗೊಳಿಸಿ ಸರಳೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸ್ವಾಗತಾರ್ಹ ಕ್ರಮ:
ತಾವು ಮುಖ್ಯಮಂತ್ರಿಯಾದ ಮೇಲೆ ಪತ್ರಕರ್ತರ ಬಗ್ಗೆ ಕಾಳಜಿ ಇಟ್ಟುಕೊಂಡು ಹಲವು ಯೋಜನೆಗಳನ್ನು ಜಾರಿಗೊಳಿಸಿರುವುದು ಅಭಿನಂದನೀಯ. ಈ ನಿಟ್ಟಿನಲ್ಲಿ ಪತ್ರಕರ್ತರ ಮಾಸಾಶನವನ್ನು 15 ಸಾವಿರಕ್ಕೆ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ತಗಡೂರು ಪತ್ರದಲ್ಲಿ ತಿಳಿಸಿದ್ದಾರೆ.