ಚಂದ್ರವಳ್ಳಿ ನ್ಯೂಸ್, ಧಾರವಾಡ / ಬೆಂಗಳೂರು:
“ಕೃಷಿ ಆಧಾರಿತ ಸ್ಟಾರ್ಟ್‍ಅಪ್‍ಗಳು ಭಾರತದ ಆರ್ಥಿಕತೆಯನ್ನು ಕ್ರಾಂತಿಗೊಳಿಸಬಲ್ಲವು, ಸಾವಯವ ಉತ್ಪನ್ನಗಳ ಮಾರ್ಕೆಟಿಂಗ್, ಫಾರ್ಮ್-ಟು-ಮಾರ್ಕೆಟ್ ಮಾದರಿ, ಕೋಲ್ಡ್ ಚೈನ್ ಮ್ಯಾನೇಜ್‍ಮೆಂಟ್ ಮತ್ತು ಕೃಷಿ-ಪ್ರವಾಸೋದ್ಯಮದಂತಹ ಹಲವು ಕ್ಷೇತ್ರಗಳು ಯುವಕರಿಗಾಗಿ ಕಾಯುತ್ತಿವೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡದ 38ನೇ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಜನತೆ “ಸ್ಟಾರ್ಟ್‍ಅಪ್ ಇಂಡಿಯಾ”, “ಡಿಜಿಟಲ್ ಇಂಡಿಯಾ”, “ಆತ್ಮನಿರ್ಭರ್ ಭಾರತ್” ನಂತಹ ಯೋಜನೆಗಳ ಸದುಪಯೊಗಪಡೆಸಿಕೊಂಡು ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದು ಕರೆ ನೀಡಿದರು.
“ಭಾರತ ಕೃಷಿ ಪ್ರಧಾನ ದೇಶ. ಇಂದಿಗೂ ನಮ್ಮ ಜನಸಂಖ್ಯೆಯ ಶೇಕಡ 60ಕ್ಕೂ ಹೆಚ್ಚು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಪಾತ್ರವು ಕೇವಲ ಶೈಕ್ಷಣಿಕವಾಗಿರದೆ ರಾಷ್ಟ್ರೀಯ ಅಭಿವೃದ್ಧಿಯೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. ಯುವ ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮಿಗಳಿಂದ ನಮ್ಮ ಕೃಷಿ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು. ಭಾರತೀಯ ಕೃಷಿ ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ, ಹವಾಮಾನ ಬದಲಾವಣೆ, ನೀರಿನ ಬಿಕ್ಕಟ್ಟು, ಮಣ್ಣಿನ ಫಲವತ್ತತೆಯ ಕುಸಿತ ಮತ್ತು ರೈತರ ಆದಾಯದಲ್ಲಿ ಅಸ್ಥಿರತೆ. ಇವೆಲ್ಲವುಗಳಿಗೆ ಪರಿಹಾರ ತಾಂತ್ರಿಕ ದಕ್ಷತೆ, ವೈಜ್ಞಾನಿಕ ಚಿಂತನೆ ಮತ್ತು ಹೊಸತನದಿಂದ ಮಾತ್ರ ಸಾಧ್ಯ” ಎಂದು ಹೇಳಿದರು.
ಕೃಷಿಯು ಡೇಟಾ ಅನಾಲಿಟಿಕ್ಸ್, ಡ್ರೋನ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಂತಹ ಸುಧಾರಿತ ವಿಭಾಗಗಳಿಗೆ ಸಂಪರ್ಕ ಹೊಂದಿದೆ. “ಸ್ಮಾರ್ಟ್ ಅಗ್ರಿಕಲ್ಚರ್” ಪರಿಕಲ್ಪನೆಯು ಈಗ ರೂಪುಗೊಳ್ಳುತ್ತಿದೆ. ಕೃಷಿ ವಿಷಯದಲ್ಲಿ ಪದವಿ ಪಡೆದ ಯುವಕರ ಸಹಭಾಗಿತ್ವದಿಂದ ಮಾತ್ರ ಇದು ಸಾಧ್ಯವಾಗುತ್ತಿದೆ. ಪ್ರಯೋಗಾಲಯಗಳಿಂದ ಹೊರಬರುವ ಸಂಶೋಧನೆಯು ಹೊಲಗಳನ್ನು ತಲುಪಿದಾಗ ಮಾತ್ರ ಯಶಸ್ವಿಯಾಗುತ್ತದೆ, ಅದರ ಪ್ರಯೋಜನಗಳನ್ನು ಸಣ್ಣ ರೈತನಿಗೆ ಅವನದೇ ಭಾμÉಯಲ್ಲಿ ವಿವರಿಸಬೇಕು. ವಿದ್ಯಾರ್ಥಿಗಳೇ, ನಿಮ್ಮ ಜ್ಞಾನವನ್ನು ರೈತರ ಕಲ್ಯಾಣ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗಾಗಿ ಬಳಸಬೇಕೆಂದು ತಿಳಿಸಿದರು.
ಕೃಷಿಯಲ್ಲಿ ನಾವೀನ್ಯತೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಸಾಧ್ಯವಿರುವ ಗ್ರಾಮಗಳನ್ನು “ಜ್ಞಾನ ಗ್ರಾಮ”ಗಳನ್ನಾಗಿ ಮಾಡಿ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಮೇಲಿನ ರೈತರ ಅವಲಂಬನೆಯನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣು, ನೀರು ಮತ್ತು ಆಹಾರವನ್ನು ಕಲುಷಿತಗೊಳಿಸುತ್ತಿದೆ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಸುರಕ್ಷಿತ ಆಹಾರವನ್ನು ಉತ್ಪಾದಿಸಲು ಸಾವಯವ ಕೃಷಿ, ನೈಸರ್ಗಿಕ ಕೃಷಿಯಂತಹ ಕೃಷಿ ಪದ್ಧತಿಗಳನ್ನು ಉತ್ತೇಜಿಸಬೇಕಾಗಿದೆ. ಇದರಿಂದ ಉತ್ಪಾದನೆ ಹೆಚ್ಚುತ್ತದೆ ಮತ್ತು ಪರಿಸರ ಸಂರಕ್ಷಣೆಗೂ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಘಟಿಕೋತ್ಸವದಲ್ಲಿ ಎನ್.ಚೆಲುವರಾಯಸ್ವಾಮಿ, ಮುಖ್ಯ ಅತಿಥಿ ಡಾ.ಶ್ರೀನಿವಾಸ್ ರಾವ್, ಕುಲಪತಿ ಡಾ.ಪಿ.ಎಲ್. ಪಾಟೀಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.