ಮಹಾಲಕ್ಷ್ಮಿ ಕೊಲೆ ಹಂತಕನ ಗುರುತು ಪತ್ತೆ, ಶೀಘ್ರ ಬಂಧನ-ಆಯುಕ್ತ ದಯಾನಂದ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದ ವೈಯಾಲಿಕಾವಲ್‌ ನಿವಾಸಿ ಮಹಾಲಕ್ಷ್ಮಿ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿ ದೇಹದ ಭಾಗಗಳನ್ನು ಫ್ರಿಡ್ಜ್ ನಲ್ಲಿಟ್ಟು ಪರಾರಿಯಾಗಿದ್ದ ಆರೋಪಿಯ ಗುರುತು ಪತ್ತೆಯಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ನಗರ ಪೊಲೀಸ್‌‍ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೊಲೆ ಆರೋಪಿ ಹೊರರಾಜ್ಯದವನು ಎಂಬುದು ಗೊತ್ತಾಗಿದೆ. ಆತ ನಗರದಲ್ಲಿ ವಾಸವಾಗಿದ್ದ. ಮಹಾಲಕ್ಷ್ಮಿಯನ್ನು ಆತನೇ ಕೊಲೆ ಮಾಡಿರುವ ಸಾಕ್ಷ್ಯಾಧಾರ ಲಭ್ಯವಾಗಿದೆ. ಕೊಲೆ ನಂತರ ಆತ ಹೊರರಾಜ್ಯಕ್ಕೆ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.

ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಒಂದು ತಂಡ ಹೊರರಾಜ್ಯಕ್ಕೆ ಹೋಗಿ ಕಾರ್ಯೋನುಖವಾಗಿದೆ. ಎಲ್ಲಾ ದೃಷ್ಟಿಕೋನಗಳಲ್ಲೂ ತನಿಖೆ ಮಾಡುತ್ತಿದ್ದೇವೆ. ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದು, ವರದಿ ಕೈ ಸೇರಿದ ನಂತರ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ ಎಂದು ಅವರು ವಿವರಿಸಿದರು.

ಎಷ್ಟು ದಿನಗಳ ಹಿಂದೆ ಮಹಾಲಕ್ಷ್ಮಿಯನ್ನು ಕೊಲೆ ಮಾಡಲಾಗಿದೆ ಎಂಬುದು ವೈದ್ಯಕೀಯ ಪರೀಕ್ಷೆಯ ಹಾಗೂ ಎಫ್‌ಎಸ್‌‍ಎಲ್‌ವರದಿಗಳಿಂದ ಗೊತ್ತಾಗಲಿದೆ. ಅವುಗಳಿಗಾಗಿ ಕಾಯುತ್ತಿದ್ದೇವೆ. ವರದಿಗಳು ಬಂದ ನಂತರ ಇನ್ನಷ್ಟು ಮಾಹಿತಿಗಳು ಹೊರಬರಲಿದೆ ಎಂದರು.

ಆರೋಪಿ ಯಾವ ಕಾರಣಕ್ಕೆ ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ್ದಾನೆ ಎಂಬುದು ಆತನ ಬಂಧನದ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಅವರು ಹೇಳಿದರು.

ಪೊಲೀಸರ ಹುಡುಕಾಟ :ಮಹಿಳೆಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿರುವ ಹಂತಕನಿಗಾಗಿ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಪತ್ತೆಗಾಗಿ ಆರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿಟಿವಿಗಳ ಪರಿಶೀಲನೆ, ಕುಟುಂಬಸ್ಥರಿಂದ ಹಾಗೂ ಸ್ನೇಹಿತರಿಂದ ಹೆಚ್ಚಿನ ಮಾಹಿತಿಗಳನ್ನು ತಂಡಗಳು ಕಲೆಹಾಕುತ್ತಿವೆ.

ಮೂಲತಃ ಹೊರ ರಾಜ್ಯದವರಾದ ಮಹಾಲಕ್ಷ್ಮಿ ರಾಜ್ಯದಲ್ಲಿ ನೆಲೆಸಿದ್ದು, ಕೌಟುಂಬಿಕ ವಿಚಾರಕ್ಕೆ ಮನಸ್ತಾಪವಾಗಿ ಪತಿಯಿಂದ ದೂರವಾಗಿ ವಯ್ಯಾಲಿಕಾವಲ್ನ ವಿನಾಯಕ ನಗರದ ಪೈಪ್ಲೈನ್ ರಸ್ತೆಯಲ್ಲಿ ಮೂರು ತಿಂಗಳ ಹಿಂದೆಯಷ್ಟೇ ಬಾಡಿಗೆ ಮನೆ ಮಾಡಿಕೊಂಡು, ಮಾಲ್ವೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು.

ಈ ನಡುವೆ ಮಹಾಲಕ್ಷ್ಮಿ(29)ಯನ್ನು ಆಕೆಯ ಮನೆಯಲ್ಲೇ ಆರೋಪಿಯು ಕೊಲೆ ಮಾಡಿ ದೇಹವನ್ನು 50ಕ್ಕೂ ಹೆಚ್ಚು ತುಂಡುತುಂಡಾಗಿ ಕತ್ತರಿಸಿ, ತರಕಾರಿ ಜೋಡಿಸುವಂತೆ ಫ್ರಿಡ್ಜನಲ್ಲಿಟ್ಟು ಸ್ಥಳದಲ್ಲಿ ಯಾವುದೇ ಸುಳಿವು ಸಿಗದಂತೆ ಚಾಲಾಕಿತನದಿಂದ ಎಸ್ಕೇಪ್ ಆಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು  ಆರೋಪಿ ಈಶಾನ್ಯ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದು  ಪೊಲೀಸರು  ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆಂದು ಹೇಳಿದರು. 

- Advertisement -  - Advertisement - 
Share This Article
error: Content is protected !!
";