ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಡದಿ ಭಾಗದಲ್ಲಿ ಪ್ರಸ್ತಾಪಿತ ಟೌನ್‌ಶಿಪ್‌ಯೋಜನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಜನತಾದಳ (ಜಾತ್ಯತೀತ) ತೀವ್ರ ವಾಗ್ದಾಳಿ ನಡೆಸಿದೆ. "ಸರಕಾರಿ ಜಾಗಕ್ಕೆ 12 ಕೋಟಿ ರೂಪಾಯಿ ಬೆಲೆ ನಿಗದಿಪಡಿಸುವ ಸರಕಾರ, ರೈತರ ಜಮೀನಿಗೆ ಕೇವಲ 2 ಕೋಟಿ ರೂಪಾಯಿ ನೀಡುತ್ತಿರುವುದು ಯಾವ ನ್ಯಾಯ?" ಎಂದು ಜೆಡಿಎಸ್ ಪ್ರಶ್ನಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪ್ರಶ್ನೆಗಳನ್ನು ಎತ್ತಿರುವ ಜೆಡಿಎಸ್, ಇದು ನ್ಯಾಯವೇ ಅಥವಾ 'ಚದರಡಿಚೋರನ' ಭೂ ದಂಧೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದೆ.
ತಾರತಮ್ಯದ ದರ ನಿಗದಿಯ ಆರೋಪ:
"ಕಳೆದ 2017ರಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಈಗಲ್‌ಟನ್ ರೆಸಾರ್ಟ್‌ಗೆ ಒಂದು ಎಕರೆ ಸರ್ಕಾರಿ ಜಾಗಕ್ಕೆ ಬರೋಬ್ಬರಿ 12 ಕೋಟಿ ರೂಪಾಯಿ ದರವನ್ನು ನಿಗದಿಪಡಿಸಲಾಗಿತ್ತು. ಆದರೆ, ಈಗ ಅದೇ ಬಿಡದಿ ಭಾಗದಲ್ಲಿ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಪಡಿಸಿಕೊಳ್ಳುವಾಗ ರೈತರ ಜಮೀನಿಗೆ ಪ್ರತಿ ಎಕರೆಗೆ ಕೇವಲ 2 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಅನ್ನದಾತರ ಭೂಮಿಗೆ ಈ ರೀತಿ ಕನಿಷ್ಠ ದರ ನಿಗದಿ ಮಾಡಿರುವುದು ದಂಧೆಯಲ್ಲದೆ ಮತ್ತೇನು?" ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
"ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸ್ವಾರ್ಥದ ಟೌನ್‌ಶಿಪ್‌ಗಾಗಿ ರೈತರ ಬದುಕಿಗೆ ಕೊಳ್ಳಿ ಇಡಲು ಹೊರಟಿದ್ದೀರಿ? ಏಕಿಷ್ಟು ಭೂದಾಹ?" ಎಂದು ಜೆಡಿಎಸ್ ನೇರವಾಗಿ ಉಪಮುಖ್ಯಮಂತ್ರಿಗಳನ್ನು ಪ್ರಶ್ನಿಸಿದೆ.
ಹೆಎಚ್.ಡಿ. ಕುಮಾರಸ್ವಾಮಿ, ಕಾಲದ ನಿರ್ಧಾರ ಉಲ್ಲೇಖ.:
2007-08ರ ಅವಧಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ, ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಇದೇ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದರು ಎಂಬುದನ್ನು ಜೆಡಿಎಸ್ ನೆನಪಿಸಿದೆ.
"ಅಂದು ರೈತರ ಹಿತ ಕಾಯಲು ಯೋಜನೆಯನ್ನೇ ರದ್ದು ಮಾಡಲಾಗಿತ್ತು. ಆದರೆ ಇಂದು ರಿಯಲ್ ಎಸ್ಟೇಟ್ ದಂಧೆಕೋರರು ಮತ್ತು ಅವರ ಪಟಾಲಂನ ಧನದಾಹಕ್ಕೆ ಬಿಡದಿಯ ಅನ್ನದಾತರನ್ನು ಬಲಿ ಕೊಡಲಾಗುತ್ತಿದೆ" ಎಂದು ಪೋಸ್ಟ್‌ನಲ್ಲಿ ದೂರಲಾಗಿದೆ.
ಜನ ದಂಗೆ ಎದ್ದಾರು: ಎಚ್ಚರಿಕೆ
ಬಿಡದಿ ಭಾಗದ ಅಸಂಖ್ಯಾತ ರೈತರು ಹೈನುಗಾರಿಕೆ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅವರ ಜಮೀನನ್ನು ಬಲವಂತವಾಗಿ ಕಸಿದುಕೊಂಡು ಒಕ್ಕಲೆಬ್ಬಿಸಬೇಡಿ ಎಂದು ಆಗ್ರಹಿಸಿರುವ ಜೆಡಿಎಸ್, "ರೈತರ ಒಡಲು ಉರಿಸಿದರೆ ನಿಮಗೆ ಅನ್ನದಾತರ ಶಾಪ ತಟ್ಟದೆ ಬಿಡದು. ದಂಧೆಕೋರರ ಮಾತು ಕೇಳಿ ಮುಂದುವರಿದರೆ ಜನರೇ ದಂಗೆ ಏಳಬೇಕಾಗುತ್ತದೆ" ಎಂದು ರಾಜ್ಯ ಸರ್ಕಾರಕ್ಕೆ ಕಡಕ್ ಎಚ್ಚರಿಕೆ ನೀಡಿದೆ.



