ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಿಲ್ಲೆಯ ಆಸಕ್ತ ರೈತರಿಗೆ ನೈಸರ್ಗಿಕ ಹಾಗೂ ಸಾವಯವ ಕೃಷಿಯ ಕುರಿತು ಇದೇ ಜುಲೈ 09 ರಿಂದ 11 ರವರೆಗೆ ಮೂರು ದಿನಗಳ ವಸತಿಯುಕ್ತ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತರಬೇತಿಯ ಮೊದಲನೇ ದಿನ ಬ್ಯಾಡರಹಳ್ಳಿ ಗ್ರಾಮದ ಪ್ರಗತಿಪರ ಸಾವಯವ ಕೃಷಿಕರಾದ ಇಂದೂಧರ ಅವರು ತಮ್ಮ ಜಮೀನಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಅಳವಡಿಸಿಕೊಂಡ ಸಾವಯವ ಕೃಷಿ ಪದ್ಧತಿಗಳು, ನೀರು ಮತ್ತು ಪೋಷಕಾಂಶಗಳ ನಿರ್ವಹಣೆ ಹಾಗೂ ರೋಗ ಮತ್ತು ಕೀಟ ನಿರ್ವಹಣಾ ಕ್ರಮಗಳ ಕುರಿತು ಮಾಹಿತಿ ನೀಡುವರು. ನಂತರ ಜೀವಾಮೃತ, ಬೀಜಾಮೃತ, ಘನ ಜೀವಾಮೃತ, ದಶಪರ್ಣಿ, ಸಸ್ಯ ಪ್ರಚೋದಕಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಯಾರಿಸಿ ರೈತರಿಗೆ ಮನವರಿಕೆ ಮಾಡಲಾಗುವುದು.
ತರಬೇತಿಯ ಎರಡನೇ ದಿನ ಮಲ್ಟಿಪ್ಲೆಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ತುಮಕೂರು ಸಂಸ್ಥೆಯ ತಾಂತ್ರಿಕ ಮುಖ್ಯಸ್ಥರಾದ ಕುಮಾರ್ ಅವರು ಸಾವಯವ ಕೃಷಿಯ ಅವಶ್ಯಕತೆ, ಉಪಯೋಗ ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಮತ್ತು ಜೈವಿಕ ಪೀಡೆನಾಶಕಗಳ ಬಳಕೆ ಹಾಗೂ ಅಡಿಕೆ ಸಿಪ್ಪೇಯಿಂದ ಕಾಂಪೋಸ್ಟ್ ತಯಾರಿಸುವ ವಿಧಾನದ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡುವರು .
ತರಬೇತಿಯ ಮೂರನೇ ದಿನ ರೈತರಿಗೆ ಎರೆಹುಳು ಗೊಬ್ಬರ ತಯಾರಿಕೆ ಹಾಗೂ ವಿವಿಧ ಕಾಂಪೋಸ್ಟ್ ತಯಾರಿಕ ಪದ್ಧತಿಗಳ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಎಲ್ಲ ರೈತ ಬಾಂಧವರಿಗೂ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಸುವ ಕಾಂಪೋಸ್ಟ್ ಕಲ್ಚರ್ ಅನ್ನು ಉಚಿತವಾಗಿ ವಿತರಿಸಲಾಗುವುದು. ಆದ ಪ್ರಯುಕ್ತ ಆಸಕ್ತ 50 ಜನ ರೈತಭಾಂದವರು ಈ ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ 8277931058 ಗೆ ಕರೆಮಾಡಿ ತರಬೇತಿಯ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ತಿಳಿಸಿದ್ದಾರೆ.
ಮೊದಲು ನೋಂದಾವಣಿ ಮಾಡಿಕೊಂಡ 50 ಜನ ರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಹಾಗೂ ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್‍ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಲು ಮನವಿ ಮಾಡಲಾಗಿದೆ.



