ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಬೆಂಗಳೂರಿಗೆ ಆಗಮಿಸುವ ವೀರಶೈವ ಲಿಂಗಾಯತ ಮಠಾಧೀಶರು ಹಾಗೂ ಭಕ್ತಾದಿಗಳು ತಂಗಲು ಅನುಕೂಲವಾಗುವಂತೆ ನಗರದ ಹೊರವಲಯದಲ್ಲಿ 2 ಎಕರೆ ಜಾಗ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. "ಜಾಗ ನಮ್ಮದು, ಕಟ್ಟಡ ನಿಮ್ಮದು" ಎಂದು ಸಮಾಜದ ಮುಖಂಡರಿಗೆ ಕರೆ ನೀಡಿದ್ದಾರೆ.
ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ‘ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2 ಎಕರೆ ಜಾಗದ ಭರವಸೆ: ಹೊರಊರುಗಳಿಂದ ಬರುವ ಮಠಾಧೀಶರು ಮತ್ತು ಭಕ್ತರ ಉಳಿದುಕೊಳ್ಳುವ ವ್ಯವಸ್ಥೆಗೆ ಮನವಿ ಬಂದ ಹಿನ್ನೆಲೆಯಲ್ಲಿ 2 ಎಕರೆ ಜಾಗ ನೀಡುವುದಾಗಿ ಪ್ರಕಟಿಸಿದ ಡಿಕೆಶಿ, ಈ ಕಟ್ಟಡಕ್ಕೆ ವೀರಗಂಗಾಧರ ಅಜ್ಜನವರ ಹೆಸರನ್ನಾದರೂ ಇಡಿ ಅಥವಾ ನಿಮ್ಮಿಷ್ಟದ ಹೆಸರು ಇಡಿ ಎಂದು ಹೇಳಿದರು.
ಧರ್ಮ ಹಾಗೂ ಬಸವಣ್ಣನವರ ತತ್ವ: ವಿಶ್ವದ ಮೊದಲ ಸಂಸತ್ತನ್ನು (ಅನುಭವ ಮಂಟಪ) ಪರಿಚಯಿಸಿದ ಬಸವಣ್ಣನವರು ಪ್ರಜಾಪ್ರಭುತ್ವದ ಮೂಲ ಪರಿಕಲ್ಪನೆ ನೀಡಿದವರು. ಸರ್ವರಿಗೂ ಸಮಬಾಳು, ಸಮಪಾಲು ಸಾರಿದ ವೀರಶೈವ ಲಿಂಗಾಯತ ಧರ್ಮ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದರು.
ಅನ್ನ-ಅಕ್ಷರ ದಾಸೋಹ: ರಾಜ್ಯದಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಲಿಂಗಾಯತ ಮಠಗಳು, ಸರ್ಕಾರಕ್ಕೆ ಸರಿಸಮನಾಗಿ ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸಂಸ್ಕಾರ, ಶಿಕ್ಷಣ ಮತ್ತು ಅಕ್ಷರ ದಾಸೋಹ ನೀಡುತ್ತಿರುವುದನ್ನು ಕೊಂಡಾಡಿದರು.
ಸೇವೆಯೇ ಪ್ರಧಾನ: "ಹನುಮಂತ ಸೇವೆಯ ಪ್ರತೀಕ. ಹಾಗಾಗಿಯೇ ಆತನಿಗೆ ಹೆಚ್ಚು ದೇವಾಲಯಗಳಿವೆ. ಸಮಾಜವು ಯಾವಾಗಲೂ ಸೇವೆ ಮಾಡುವವರನ್ನು ನೆನಪಿಟ್ಟುಕೊಳ್ಳುತ್ತದೆ. ಭಕ್ತಿಯೇ ಜಾತಿ, ಕರ್ಮವೇ ಧರ್ಮ ಎಂಬ ತತ್ವದಲ್ಲಿ ನಾವೆಲ್ಲರೂ ಸಾಗಬೇಕು" ಎಂದು ಕರೆ ನೀಡಿದರು.
ಹೆಸರಿನ ಹಿಂದಿನ ರೋಚಕ ಕಥೆ: ತಮಗೆ 'ಶಿವಕುಮಾರ್' ಎಂದು ಹೆಸರಿಡಲು ಕಾರಣವಾದ ಕೌಟುಂಬಿಕ ಹಿನ್ನೆಲೆಯನ್ನು ಹಂಚಿಕೊಂಡ ಅವರು, ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ರೇಣುಕಾಚಾರ್ಯ ಕಾಲೇಜಿನಲ್ಲಿ ದೊರೆತ ವೀರಗಂಗಾಧರ ಅಜ್ಜನವರ ಆಶೀರ್ವಾದವನ್ನು ಸ್ಮರಿಸಿಕೊಂಡರು.




